ಒಂದೇ ಚಿತ್ರದಲ್ಲಿ ಸಹೋದರರು-ಸಹೋದರಿಯರು ಕೆಲಸ ಮಾಡಿರುವುದನ್ನು ನೋಡಿರುತ್ತೀರಿ. ಹಾಗೆಯೇ ತಂದೆಯ ಆ್ಯಕ್ಷನ್ ಕಟ್ನಲ್ಲಿ ಮಕ್ಕಳು ಹೀರೋ/ಹೀರೋಯಿನ್ ಆಗಿರುವ ಅನೇಕ ನಿದರ್ಶನಗಳು ಚಿತ್ರರಂಗದಲ್ಲಿದೆ. ಇವೆಲ್ಲದರ ನಡುವೆ ಇದೀಗ ಕನ್ನಡ ಚಿತ್ರರಂಗದಲ್ಲಿ ತಂದೆ ಮತ್ತು ಮಗ ಒಂದೇ ಚಿತ್ರದಲ್ಲಿ ಸಂಗೀತ ನೀಡಿ ಸದ್ದು ಮಾಡಿದ್ದಾರೆ.
ಅವರು ಮತ್ಯಾರೂ ಅಲ್ಲ, ಕಾಮಿಡಿ ಕಿಂಗ್ ಸಾಧು ಕೋಕಿಲ ಮತ್ತು ಮಗ ಸುರಾಗ್. ಈಗಾಗಲೇ ಸಾಧು ಪುತ್ರ ಅತಿರಥ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟಾಗಿದೆ. ಇದೀಗ ಮತ್ತೊಂದು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಈ ಚಿತ್ರಕ್ಕೆ ಸಂಗೀತ ನೀಡಿರುವುದು ತಂದೆ ಸಾಧು ಕೋಕಿಲ ಎಂಬುದು.
ಅಂದಹಾಗೆ ಯಾವುದಪ್ಪಾ ಆ ಸಿನಿಮಾ ಅಂದರೆ ಶಿವಾರ್ಜುನ. ಚಿರಂಜೀವಿ ನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ತಂದೆ-ಮಗ ಜುಗಲ್ಬಂದಿಯಲ್ಲಿ ಸಂಗೀತ ಮೂಡಿಬಂದಿರುವುದು ವಿಶೇಷ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿರುಗೆ ನಾಯಕಿಯಾಗಿ ಅಮೃತಾ ಬಣ್ಣ ಹಚ್ಚಿದ್ದಾರೆ.
ಈ ಹಿಂದೆ ಧೈರ್ಯಂ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಶಿವತೇಜಸ್ ಶಿವಾರ್ಜುನ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಅವಿನಾಶ್, ಕುರಿ ಪ್ರತಾಪ್, ಸಾಧುಕೋಕಿಲ, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಸೇರಿದಂತೆ ದೊಡ್ಡ ತಾರಾ ಬಳಗವೇ ಕಾಣಿಸಿಕೊಂಡಿದ್ದಾರೆ.
Comments are closed.