ಉಡುಪಿ: ತಂದೆ ಹಾಗೂ ಮಗನ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಾಪು ಸಮೀಪದ ಮಟ್ಟು ಸಮುದ್ರ ತೀರದಲ್ಲಿ ನಡೆದಿದೆ. ಮೃತದೇಹಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾದ ತಂದೆ ಮಗನ ಮೃತದೇಹ ಇದಾಗಿದೆ.
ಬಂಟ್ವಾಳ ಬಾಳ್ತಿಲ ನಿವಾಸಿ ಗೋಪಾಲಕೃಷ್ಣ ರೈ (55) ಮತ್ತು ಪುತ್ರ ನಮೀಶ್ ರೈ( 6) ಫೆ.16 ನಸುಕಿನ ಜಾವದಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಮುಂಬೈನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಗೋಪಾಲಕೃಷ್ಣ ರೈ ಇವರು ಪತ್ನಿ ಪಾವೂರುಗುತ್ತು ಮನೆ ಸಮೀಪ ನಡೆಯುತ್ತಿದ್ದ ಗ್ರಾಮದ ಪೈಚಿಲ್ ನೇಮಕ್ಕೆಂದು ಮುಂಬೈನಿಂದ ಊರಿಗೆ ಆಗಮಿಸಿದ್ದರು. ನೇಮ ವೀಕ್ಷಿಸುತ್ತಿದ್ದ ಗೋಪಾಲಕೃಷ್ಣ ಅವರು ತಡರಾತ್ರಿ ಪುತ್ರನ ಜತೆಗೆ ಕಾರಿನಲ್ಲಿ ತೆರಳಿ ನಾಪತ್ತೆಯಾಗಿದ್ದರು. ಈ ಕಾರು ಫೆಬ್ರವರಿ ಹದಿನಾರರಂದು ಭಾನುವಾರ ಬೆಳಗ್ಗಿನ ಜಾವ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿತ್ತು.ನೇತ್ರಾವತಿ ಸೇತುವೆಯಲ್ಲಿ ಕಾರು ನಿಂತಿದ್ದು ವಾಹನದಲ್ಲಿ ಯಾರೂ ಇಲ್ಲದ್ದು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದರು.
‘ಪುತ್ರನನ್ನು ಕೊಂದ ಪಾಪಿ ತಾನು, ಪತ್ನಿಗೆ ದ್ರೋಹ ಎಸಗುತ್ತಿದ್ದೇನೆ. ಇತರೆ ಹಲವು ವಿಚಾರಗಳನ್ನು ಬರೆದ ಎಂಟು ಪುಟಗಳುಳ್ಳ ಡೆತ್ ನೋಟ್ ಕಾರಿನ ಡ್ಯಾಷ್ ಬೋರ್ಡಿನಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ನಡೆಸಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ಐದು ದಿನಗಳ ಕಾಲ ಸ್ಥಳೀಯ ಈಜುಗಾರರು, ದೋಣಿ ಮಾಲೀಕರು, ಕೋಸ್ಟ್ ಗಾರ್ಡ್, ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಉಡುಪಿಯ ಅಜ್ಜರಕಾಡು ಶವಾಗಾರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Comments are closed.