ಬೆಂಗಳೂರು: ನಕಲಿ ಸ್ವಾಮೀಜಿಯೊಬ್ಬ ಕಷ್ಟ ಪರಿಹರಿಸುವುದಾಗಿ ಮಹಿಳೆಯೊಬ್ಬರನ್ನು ವಂಚಿಸಿ ಆಸ್ತಿ ಮಾರಾಟ ಮಾಡಿಸಿ ಬರೋಬ್ಬರಿ 24 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಹಾಗೂ ಬೆಂಗಳೂರಿನ ನಿವಾಸಿಗಳಾದ ದೇವರಾಜ್, ಸಾಯಿಕೃಷ್ಣ, ಪೆರುಮಾಳ್ ಮತ್ತು ಮಂಜು ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಆಸ್ತಿ ಮಾರಾಟದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ನಕಲಿ ಸ್ವಾಮೀಜಿ ನಾಗರಾಜ್ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮೂವರು ಮಕ್ಕಳ ಜೊತೆ ರಾಮಮೂರ್ತಿ ನಗರದಲ್ಲಿ ನೆಲೆಸಿರುವ ಗೀತಾ ಎಂಬುವರ ಪತಿ 2009ರಲ್ಲಿ ನಿಧನರಾಗಿದ್ದರು. ಕೋಲಾರದ ಬೇತಮಂಗಲ ಬಳಿ ಜಮೀನು, ಬೆಂಗಳೂರು ಹೊರವಲಯದ ತಾವರೆಕೆರೆ ಮತ್ತು ನಗರದ ವಿವಿಧೆಡೆ ಹಲವು ಆಸ್ತಿಗಳನ್ನು ಗೀತಾ ಕುಟುಂಬ ಹೊಂದಿತ್ತು. ಜಮೀನುಗಳ ಮಾಲೀಕರಾಗಿದ್ದ ಪತಿ ನಿಧನದ ಬಳಿಕ ಆಸ್ತಿಯನ್ನು ಗೀತಾ ನೋಡಿಕೊಳ್ಳುತ್ತಿದ್ದರು.
ಆದರೆ, ಸಂಬಂಧಿಕರ ಜೊತೆಗೆ ಆಸ್ತಿ ವಿಚಾರವಾಗಿ ಗೀತಾ ಅವರೊಂದಿಗೆ ವಿವಾದ, ವ್ಯಾಜ್ಯಗಳು ಉದ್ಭವವಾಗಿದ್ದವು. ಜಮೀನಿನಲ್ಲಿ ಕೆಲಸ ಮಾಡುವವರ ಮೂಲಕ ಬಂಗಾರಪೇಟೆಯ ಸಿ.ನಾಗರಾಜ ಎಂಬಾತ ಪರಿಚಯವಾಗಿದ್ದ. ನಾಗರಾಜನ ಬಳಿ ದಿವ್ಯ ಶಕ್ತಿ ಇದೆ. ಕೆಟ್ಟ ಶಕ್ತಿಗಳು, ದೋಷಗಳನ್ನು ಅವರು ನಿವಾರಣೆ ಮಾಡುವ ದೈವಶಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದರು. ಹೀಗಾಗಿ, ಗೀತಾ ಅವರು ನಾಗರಾಜನನ್ನು ಭೇಟಿ ಮಾಡಿದ್ದರು.
”ನನ್ನನ್ನು ದೇವರೇ ಕಳುಹಿಸಿದ್ದಾನೆ ಎಂದು ಹೇಳಿ, ಎಲ್ಲಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ,”ಎಂದು ನಾಗರಾಜ್ ವಂಚಿಸಿದ್ದಾನೆಂದು ಗೀತಾ ಹೇಳಿದ್ದಾರೆ.
ಹಣ, ಆಭರಣ ಸುಲಿಗೆ
ಕಷ್ಟ ಪರಿಹಾರ ನೆಪದಲ್ಲಿ ಆರೋಪಿ ನಾಗರಾಜ ಚಿನ್ನದ ಗಟ್ಟಿಗಳನ್ನು ನೀಡಿ ಎಂದಿದ್ದಾನೆ. ಆತನ ಮಾತು ನಂಬಿದ ಗೀತಾ ಅವರು ಮನೆಯಲ್ಲಿದ್ದ ಸುಮಾರು 3 ಕೆ.ಜಿ. ಚಿನ್ನಾಭರಣ ನೀಡಿದ್ದಾರೆ. ಆಭರಣ ಪಡೆದುಕೊಂಡ ಬಳಿಕ ಆರೋಪಿಯು ‘ನಿಮ್ಮ ಕೆಲವು ಆಸ್ತಿಗಳನ್ನು ಮಾರಾಟ ಮಾಡಬೇಕು. ಅವುಗಳಿಂದಲೇ ನಿಮಗೆ ಎಲ್ಲ ಸಮಸ್ಯೆಗಳು ಸೃಷ್ಟಿಯಾಗಿವೆ’ ಎಂದಿದ್ದಾನೆ.
”ನನ್ನ ಹಲವು ಆಸ್ತಿ ಮಾರಾಟ ಮಾಡಿದ್ದೇನೆ. ಕೆಲವು ವಾಸದ ಮನೆಗಳನ್ನು ಕೂಡ ಅಡ ಇಟ್ಟಿದ್ದೇನೆ. ಆಸ್ತಿ ಮಾರಾಟದಿಂದ ಪಡೆದ 22.5 ಕೋಟಿ ರೂ. ಮತ್ತು ಪತಿ ಉಳಿತಾಯ ಮಾಡಿಟ್ಟಿದ್ದ 5 ಕೋಟಿ ರೂ. ನಗದನ್ನು ನಾಗರಾಜ ಪಡೆದಿದ್ದಾನೆ” ಎಂದು ಗೀತಾ ಆರೋಪಿಸಿದ್ದಾರೆ.
”ಪರ್ಯಾಯ ಆಸ್ತಿ ಕೊಡಿಸುವುದಾಗಿ ನನ್ನ ಆಸ್ತಿಗಳನ್ನು ನಾಗರಾಜ ಮಾರಾಟ ಮಾಡಿಸಿದ್ದ. ನಂತರ ನನ್ನ ಹಣ ಮರಳಿಸುವಂತೆ ಕೇಳಿದಾಗ ನನಗೆ ಮತ್ತು ನನ್ನ ಮಕ್ಕಳಿಗೆ ದುಷ್ಟ ಶಕ್ತಿಗಳ ಮೂಲಕ ಕೊಲೆ ಬೆದರಿಕೆ ಹಾಕಿದ್ದಾನೆ. 2016ರಿಂದ 2019ರ ನಡುವೆ ಈ ವಂಚನೆ ನಡೆದಿದೆ” ಎಂದು ಗೀತಾ ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದರು.
ವಂಚನೆ, ಬೆದರಿಕೆ, ಒಳಸಂಚು ಮತ್ತು ಮೂಢನಂಬಿಕೆ ಪ್ರತಿಬಂಧಕ ಕಾಯಿದೆಯಡಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂತರ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವಹಿಸಲಾಗಿತ್ತು. ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ನಾಗರಾಜನ ಮನೆಯಲ್ಲಿ 47 ಆಸ್ತಿ ದಾಖಲೆಗಳು ಪತ್ತೆ
ನಕಲಿ ಸ್ವಾಮೀಜಿ ನಾಗರಾಜನ ಮನೆಯಲ್ಲಿ ಸಿಸಿಬಿ ಪೊಲೀಸರು ನಡೆಸಿದ ಶೋಧದ ವೇಳೆ 47 ಆಸ್ತಿ ದಾಖಲೆಗಳು ಸಿಕ್ಕಿವೆ. ಮಹಿಳೆಗೆ ವಂಚನೆ ಹಾಗೂ ಇನ್ನಿತರ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಅವುಗಳ ಪರಿಶೀಲನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ತಲೆಮರೆಸಿಕೊಂಡಿರುವ ಆರೋಪಿ ನಾಗರಾಜ್ ಬಂಧನಕ್ಕೆ ಬಲೆ ಬೀಸಲಾಗಿದೆ. ವಾರೆಂಟ್ ಪಡೆದು ನಾಗರಾಜನ ಮನೆಯಲ್ಲಿ ಶೋಧ ನಡೆಸಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
Comments are closed.