ಉಡುಪಿ: ಹಿಂದುಳಿದ ವರ್ಗಗಳ ಮೇಲಾಗುವ ದೌರ್ಜನ್ಯ ತಡೆದು ಅವರ ಜೀವನ ಸುಧಾರಿಸುವ ದೃಷ್ಟಿಯಿಂದ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆ ತರಲಾಗಿದ್ದು, ಈ ಕಾಯ್ದೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಪಡೆದುಕೊಂಡು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಮಾಜದಲ್ಲಿ ಸಮಾನತೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಪಿಟಿಎಸ್ಪಿ ನೋಡಲ್ ಸಲಹೆಗಾರ ಡಾ. ಇ ವೆಂಕಟಯ್ಯ ಹೇಳಿದರು.
ಅವರು ಶನಿವಾರ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ದೌರ್ಜನ್ಯ ತಡೆ ಅಧಿನಿಯಮ 1989 ಮತ್ತು ನಿಯಮಗಳು, ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಉಪಯೋಜನೆ ಅಧಿನಿಯಮ 2013 ಮತ್ತು ನಿಯಮಗಳು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರದ ಕುರಿತು ಅರಿವು ಮೂಡಿಸುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್ಸಿಎಸ್ಪಿಟಿಎಸ್ಪಿ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದು ಆರ್ಹರಿಗೆ ಸೂಕ್ತ ಸೌಲಭ್ಯ ಸಿಗುವಂತಾಗಬೇಕು. ಕರ್ನಾಟಕದಲ್ಲಿ ಸರಾಸರಿಯಾಗಿ 2000 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹೆಚ್ಚಿನ ಶ್ರಮ ವಹಿಸಿದರೂ ಇನ್ನೂ ಈ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಸುಳ್ಳು ಜಾತಿ ಪ್ರಮಾಣ ಪತ್ರಗಳ ಕುರಿತು ಮಾತನಾಡಿದ ಅವರು, ಸುಳ್ಳು ಪ್ರಮಾಣ ಪತ್ರದ ಆಧಾರದ ಮೇಲೆ ಇತರ ಜಾತಿಯ ಜನರು, ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸಿ ಅರ್ಹ ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು. ಹಾಗೂ ಎಸ್ಸಿ-ಎಸ್ಟಿ ಸಮಾಜದ ಮೇಲಾಗುವ ದೌರ್ಜನ್ಯ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್, ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹ ಅತ್ಯುತ್ತಮವಾದ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಲ್ಲಿ ನಡೆಸಿರುವುದು ಹೆಮ್ಮೆಯ ವಿಚಾರ. ಎಲ್ಲಾ ಇಲಾಖೆಯ ಯೋಜನೆಗಳನ್ನು ಉಡುಪಿ ಜಿಲ್ಲೆಯಿಂದಲೇ ಆರಂಭಿಸಲು ಉತ್ಸಾಹಕವಾಗಿದ್ದು, ಇದು ನಮ್ಮೆಲ್ಲರ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಾರ್ಯಗಾರದ ಸಂಪೂರ್ಣ ಮಾಹಿತಿ ಪಡೆದು ಎಸ್ಸಿ-ಎಸ್ಟಿ ಸಮುದಾಯಕ್ಕೆ ಉತ್ತಮ ಸೇವೆಯನ್ನು ನೀಡಲು ಕಂಕಣ ಬದ್ಧರಾಗುವಂತೆ ಕರೆ ನೀಡಿದ ಅವರು, ಎಸ್ಸಿಎಸ್ಪಿ ಟಿಎಸ್ಪಿ ಕಾಯ್ದೆಯ ಸೆಕ್ಷನ್ 25ರ ಅನ್ವಯ ಸರಕಾರಿ ಅಧಿಕಾರಿ ಹಾಗೂ ಸರಕಾರಿ ನೌಕರರ ಕಾರ್ಯದಲ್ಲಿ ಲೋಪದೋಷಗಳು ಕಂಡು ಬಂದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣ ಕಾಯ್ದೆ ಅಡಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ನ್ನು ನೇಮಕ ಮಾಡಲಾಗಿದ್ದು, ಅವರಿಗೆ ಪ್ರತಿ ಪ್ರಕರಣಕ್ಕೆ ಶುಲ್ಕ ನೀಡುವ ವಿಚಾರ ಕುರಿತು ಹಾಗೂ ಪ್ಯಾನಲ್ ಅಡ್ವಕೇಟ್ಗಳಿಗೆ ಪ್ರತಿ ಪ್ರಕರಣಕ್ಕೆ ನೀಡಬೇಕಾದ ಶುಲ್ಕದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಪಿ ಟಿಎಸ್ಪಿ ನೋಡಲ್ ಸಲಹೆಗಾರ ಡಾ. ಇ.ವೆಂಕಟಯ್ಯ ಅವರಲ್ಲಿ ಮನವಿ ಮಾಡಿದರು.
ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ಡಾ. ರಾಮಚಂದ್ರ ರಾವ್ ದೌರ್ಜನ್ಯ ತಡೆ ಅಧಿನಿಯಮ 1989 ಮತ್ತು ನಿಯಮಗಳು, ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಉಪಯೋಜನೆ ಅಧಿನಿಯಮ 2013 ಮತ್ತು ನಿಯಮಗಳು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರದ ಕುರಿತು ಅರಿವು ಮೂಡಿಸುವ ಕಾರ್ಯಗಾರದ ಕುರಿತು ಮಾಹಿತಿ ನೀಡುತ್ತಾ ಮಾತನಾಡಿ, ದೌರ್ಜನ್ಯ ತಡೆ ಕಾಯ್ದೆ ಮೂಲಕ ಸಮಾಜ ಸುಧಾರಣ ಕಾರ್ಯಗಳಾಗಬೇಕಾಗಿದ್ದು, ದೌರ್ಜನ್ಯ ಕಾಯ್ದೆ ಕುರಿತು ಸಂಪೂರ್ಣ ಮಾಹಿತಿ ಪಡೆದು ಎಸ್ಸಿ-ಎಸ್ಟಿ ವರ್ಗಗಳ ಏಳಿಗೆಗಾಗಿ ಎಲ್ಲಾ ಇಲಾಖಾ ಅಧಿಕಾರಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಕಾಯ್ದೆಗಳು ದುರಪಯೋಗವಾಗದಂತೆ ತಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಾತಿ ಪ್ರಮಾಣ ಪತ್ರ ನೀಡುವ ವೇಳೆ ಸರಿಯಾದ ಪರಿಶೀಲನೆ ನಡೆಸಿ ಜಾತಿ ಪ್ರಮಾಣ ಪತ್ರ ನೀಡಿ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಅವರು, ಕಾಯ್ದೆಯನ್ನು ಉಲ್ಲಂಘಿಸಿದ ಅಧಿಕಾರಿ ಹಾಗೂ ಅರ್ಜಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೊರಗ ಸಮುದಾಯದಲ್ಲಿ ಶೈಕ್ಷಣಿಕ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿನಿ ಸ್ನೇಹ ಹಾಗೂ ಬುಡಕಟ್ಟು ಸಮಾಜದ ಏಳಿಗೆಗಾಗಿ ಶ್ರಮಿಸಿದ ಸಮಗ್ರ ಗ್ರಾಮೀಣ ಆಶ್ರಮ ಕಾಪುವಿನ ಸ್ವಯಂ ಸೇವಾ ಸಂಸ್ಥೆಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲ್ಲೋತ್, ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಎಸ್ಪಿ ಟಿಎಸ್ಪಿ ನಿರ್ದೇಶಕಿ ಊರ್ಮಿಳಾ, ಎಸ್ಪಿ ವಿಷ್ಣುವರ್ಧನ್, ಮಂಗಳೂರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಲಿಡ್ಕರ್ ನ ವ್ಯವಸ್ಥಾಪಕ ನಿರ್ದೇಶಕ ನಟರಾಜ್, ಉಡುಪಿ ಹಾಗೂ ದ.ಕ ಜಿಲ್ಲಾ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಮೇಶ್ ಕಾರ್ಯಕ್ರಮವನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಟಿಡಿಪಿ ಅಧಿಕಾರಿ ಲಲಿತಾ ಬಾಯಿ ವಂದಿಸಿದರು.
Comments are closed.