ರಾಷ್ಟ್ರೀಯ

ಏಪ್ರಿಲ್ 1 ರಿಂದ 10 ಬ್ಯಾಂಕುಗಳು 4 ಬ್ಯಾಂಕ್​ಗಳಾಗಿ ವಿಲೀನ: ನಿರ್ಮಲಾ ಸೀತಾರಾಮನ್

Pinterest LinkedIn Tumblr


ನವದೆಹಲಿ: ನಷ್ಟದಲ್ಲಿರುವ ಬ್ಯಾಂಕ್​ಗಳ ವಿಲೀನಕ್ಕೆ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಇದೀಗ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದ್ದು, ಲೋಕಸಭೆಯಲ್ಲಿ ವಿಲೀನ ಪ್ರಕ್ರಿಯೆಗೆ ಅನುಮತಿ ಸಿಕ್ಕಿದೆ. ಸರ್ಕಾರವು ವಿಲೀನಗೊಳ್ಳುತ್ತಿರುವ ಬ್ಯಾಂಕುಗಳೊಂದಿಗೆ ಸಂಪರ್ಕದಲ್ಲಿದ್ದು ಯಾವುದೇ ರೀತಿಯ ನಿಯಮಗಳನ್ನು ಹಾಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

10 ಸಾರ್ವಜನಿಕ ಬ್ಯಾಂಕ್​ಗಳನ್ನು 4 ಬ್ಯಾಂಕ್​ಗಳಾಗಿ ವಿಲೀನಗೊಳಿಸುವ ಪ್ರಕ್ರಿಯೆ ಇದೇ ಏಪ್ರಿಲ್ 1ರಿಂದ ಆರಂಭವಾಗುವುದು ಎಂದು ಬುಧವಾರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ.

ಲೋಕ ಸಭೆ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಅನುಮತಿಯನ್ನು ನೀಡಿದ್ದು, ಸರ್ಕಾರ ವಿಲೀನಗೊಳ್ಳುತ್ತಿರುವ ಬ್ಯಾಂಕುಗಳೊಂದಿಗೆ ಸಂಪರ್ಕದಲ್ಲಿದೆ. ಯಾವುದೇ ರೀತಿಯ ನಿಯಮಗಳನ್ನು ನಾವು ಬ್ಯಾಂಕ್​ಗಳಿಗೆ ಹಾಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್​ ಹೇಳಿದ್ದಾರೆ.

ಬ್ಯಾಂಕುಗಳ ವಿಲೀನದ ಬಗ್ಗೆ ಈಗಾಗಲೇ ಆಯಾ ಬ್ಯಾಂಕುಗಳ ನಿರ್ದೇಶಕರು ನಿರ್ಧಾರವನ್ನು ತೆಗೆದುಕೊಂಡಾಗಿದೆ ಎಂದು ವರದಿಗಾರರಿಗೆ ಅವರು ತಿಳಿಸಿದರು. ಜಾಗತಿಕ ಬ್ಯಾಂಕುಗಳನ್ನು ಮಾಡುವ ಉದ್ದೇಶದಿಂದ ಈ ವಿಲೀನ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ ಎಂದರು.

ಬ್ಯಾಂಕಿಂಗ್ ವ್ಯವಸ್ಥೆಯ ಬಲವರ್ಧನೆ ಮಾಡುವ ಸಲುವಾಗಿ 2019 ಆಗಸ್ಟ್​ ತಿಂಗಳಲ್ಲಿ ಸರ್ಕಾರ ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕ್​ಗಳನ್ನು ವಿಲೀನಗೊಳಿಸಲು ಆದೇಶಿಸಿತ್ತು. ಸಾರ್ವಜನಿಕ ವಲಯದಲ್ಲಿ 27 ಬ್ಯಾಂಕ್​ಗಳನ್ನು 12 ಬ್ಯಾಂಕ್​ಗಳಾಗಿ ವಿಲೀನಗೊಳಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಸಾಲದಾತರನ್ನು ಜಾಗತಿಕ ಮಟ್ಟಕ್ಕೇರಿಸುವ ಗುರಿ ಇದಾಗಿದೆ ಎಂದು ಕೇಂದ್ರ ತಿಳಿಸಿತ್ತು.

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್​ ಅನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್​ ಜೊತೆ ವಿಲೀನಗೊಳಿಸಲಾಗುವುದು. ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್​ ಜೊತೆ ವಿಲೀನಗೊಳಿಸಲಾಗುತ್ತದೆ. ಅಲಹಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್​ ಜೊತೆ ಮತ್ತು ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್​ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲಾಗುವುದು.

ಕಳೆದ ವರ್ಷ, ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನಗೊಳಿಸಲಾಗಿತ್ತು. ಇದಕ್ಕೂ ಮೊದಲು ಐದು ಎಸ್​ಬಿಐನ ಅಡಿಯಲ್ಲಿದ್ದ ಬ್ಯಾಂಕುಗಳನ್ನು ಮತ್ತು ಮಹಿಳಾ ಬ್ಯಾಂಕ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವಿಲೀನಗೊಳಿಸಲಾಗಿತ್ತು.

Comments are closed.