ಬೆಂಗಳೂರು: ರಾಜ್ಯ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯದ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು 2020-21ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ಪೆಟ್ರೋಲ್ ಮೇಲಿನ ತೆರಿಗೆ ಪ್ರಮಾಣವನ್ನು ಶೇ.32 ರಿಂದ ಶೇ.35ಕ್ಕೆ ಏರಿಕೆ ಮಾಡಿದ್ದು, ಡೀಸೆಲ್ ಮೇಲಿನ ತೆರಿಗೆ ಪ್ರಮಾಣವನ್ನು ಶೇ.21ರಿಂದ 24ಕ್ಕೆ ಏರಿಕೆ ಮಾಡಿದ್ದಾರೆ.
ಇಂದು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಬಜೆಟ್ ಮಂಡಿಸಿ ಭಾಷಣ ಮಾಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, “ರಾಜ್ಯದಲ್ಲಿ ಜಿಎಸ್ಟಿ ತೆರಿಗೆ ಹಣ ಸಂಗ್ರಹಣೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.14ರಷ್ಟು ಅಧಿಕವಾಗಿದೆ. ಅಲ್ಲದೆ, ಅಭಿವೃದ್ಧಿಗಾಗಿ ಮತ್ತಷ್ಟು ಹಣ ಸಂಗ್ರಹಿಸುವ ಸಲುವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಬಕಾರಿ ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಬಜೆಟ್ನಲ್ಲಿ ಮೈತ್ರಿ ಸರ್ಕಾರದ ನಾಯಕರಾಗಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಧ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರು ಆದರೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2 ರೂಪಾಯಿಯಷ್ಟು ಇಳಿಸುವ ಮೂಲಕ ಸಮತೋಲನ ಕಾಪಾಡಿದ್ದರು. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರ ಈ ತೆರಿಗೆ ಪ್ರಮಾಣವನ್ನು ಮತ್ತೆ ಶೇ.3 ರಷ್ಟು ಏರಿಸಿರುವುದು ತೈಲ ಮತ್ತು ದಿನನಿತ್ಯ ಬಳಕೆಯ ವಸ್ತುಗಳು ಮತ್ತಷ್ಟು ಹೆಚ್ಚುವ ಸೂಚನೆ ನೀಡಿದಂತಾಗಿದೆ. ಅಲ್ಲದೆ, ಅಬಕಾರಿ ಸುಂಕವನ್ನೂ ಶೇ.6 ರಷ್ಟು ಹೆಚ್ಚಿಸಿರುವ ಪರಿಣಾಮ ಮಧ್ಯಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ.
ಪ್ರಸ್ತುತ ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ಶೇ.32 ರಷ್ಟು ತೆರಿಗೆ ವಿಧಿಸುತ್ತಿದ್ದರೆ, ಡೀಸೆಲ್ ಮೇಲೆ ಶೇ.21ರಷ್ಟು ತೆರಿಗೆ ವಿಧಿಸುತ್ತಿದೆ. ಬಜೆಟ್ ಅನುಷ್ಠಾನಗೊಂಡರೆ ಈ ಪ್ರಮಾಣ ತಲಾ ಶೇ.3ರಷ್ಟು ಹೆಚ್ಚಾಗಲಿದೆ. ಪರಿಣಾಮ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.
ಅದರಂತೆ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1.60ರೂ ದರ ಮತ್ತು ಡೀಸೆಲ್ ದರದಲ್ಲಿ 1.59 ರೂ ಹೆಚ್ಚಳವಾಗಲಿದೆ.
Comments are closed.