ನವದೆಹಲಿ: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಇದೀಗ ಪ್ರತಿ ಜಿಬಿ ಡೇಟಾದ ಫ್ಲೋರ್ ಬೆಲೆಯನ್ನು ರೂ.15ಕ್ಕೆ ಹೆಚ್ಚಿಸಲು ಬೇಡಿಕೆ ಸಲ್ಲಿಸಿದೆ. ಜೊತೆಗೆ TRAIಗೆ ಈ ಕುರಿತು ಶಿಫಾರಸ್ಸು ಮಾಡಿರುವ ಜಿಯೋ, ಮುಂಬರುವ ಸುಮಾರು 6ರಿಂದ9 ತಿಂಗಳ ಅವಧಿಯಲ್ಲಿ ಈ ಬೆಲೆಯನ್ನೂ ಕೂಡ ಹೆಚ್ಚಿಸಿ ಪ್ರತಿ ಜಿಬಿ ಡೇಟಾಗೆ ರೂ.20ನ್ನು ನಿಗದಿಪಡಿಸಬೇಕು ಎಂದು ಬೇಡಿಕೆ ಸಲ್ಲಿಸಿದೆ.
ವರದಿಯೊಂದರ ಪ್ರಕಾರ ವೈಯರ್ ಲೆಸ್ ಡೇಟಾ ಬೆಲೆಯನ್ನು ಇನ್ಮುಂದೆ ಬಳಕೆದಾರರ ಬಳಕೆಯನ್ನು ಆಧರಿಸಿ ನಿರ್ಧರಿಸಬೇಕು ಎಂದು ಜಿಯೋ ಹೇಳಿದೆ ಎನ್ನಲಾಗಿದೆ. ಆದರೆ, ಇನ್ನೊಂದೆಡೆ ವೈಸ್ ಟ್ಯಾರಿಫ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬಾರದು ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ ರೀತಿ ಮಾಡುವುದು ತುಂಬಾ ಕಷ್ಟ ಹಾಗೂ ಇದರಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಯಾಗಲಿದೆ ಎಂದೂ ಕೂಡ ಹೇಳಿದೆ.
ಈ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ಪತ್ರ ಬರೆದಿರುವ ರಿಲಯನ್ಸ್ ಜಿಯೋ, ಭಾರತೀಯ ಬಳಕೆದಾರರು ಬೆಲೆ ನಿಗದಿಯ ಕುರಿತು ತುಂಬಾ ಸೂಕ್ಷ್ಮರಾಗಿದ್ದು, ಪ್ರತಿ ಜಿಬಿ ಡೇಟಾ ಬೆಲೆಯನ್ನು ಏಕಕಾಲಕ್ಕೆ ಹೆಚ್ಚಿಸದೇ, ಹಂತಹಂತಗಳಲ್ಲಿ ಹೆಚ್ಚಿಸಬೇಕು. ಇದರಿಂದ ಗ್ರಾಹಕರಿಗೆ ದುಬಾರಿ ಟ್ಯಾರಿಫ್ ಹೆಚ್ಚು ಪ್ರಭಾವಿತಗೊಳಿಸದು. ಇದರ ಜೊತೆಗೆ ಇದರಲ್ಲಿ ಕಾರ್ಪೋರೆಟ್ ಕಂಪನಿಗಳನ್ನೂ ಸಹ ಶಾಮೀಲುಗೊಳಿಸಬೇಕು ಎಂದೂ ಕೂಡ ರಿಲಯನ್ಸ್ ಜಿಯೋ ಹೇಳಿದೆ.
Comments are closed.