ರಾಷ್ಟ್ರೀಯ

11 ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದ ಅತ್ಯಾಚಾರ

Pinterest LinkedIn Tumblr


ಹೈದರಾಬಾದ್: 27 ವರ್ಷದ ಶಿಕ್ಷಕನೊಬ್ಬ ಎರಡು ವರ್ಷದ ಅವಧಿಯಲ್ಲಿ 11 ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇದೀಗ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಆರೋಪಿ 9 ಮತ್ತು 10 ವರ್ಷದೊಳಗಿನ 11 ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎಲ್ಲಾ ಸಂತ್ರಸ್ತೆಯರು 4ನೇ ತರಗತಿಯ ವಿದ್ಯಾರ್ಥಿನಿಯರು ಎಂದು ತಿಳಿದುಬಂದಿದೆ. ಅಲ್ಲದೇ ಅವರಲ್ಲಿ ಕೆಲವರು ಅಧಿಕ ಬಾರಿ ಅತ್ಯಾಚಾರಕ್ಕೊಳಗಾಗಿದ್ದಾರೆ. ಆರೋಪಿ ಶಿಕ್ಷಕ ಟ್ಯೂಷನ್ ಕೂಡ ನಡೆಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯೊಬ್ಬಳ ಪೋಷಕರು ಮಗಳ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ಗಮನಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಪೋಷಕರು ಈ ಬಗ್ಗೆ ಮಗಳ ಬಳಿ ಕೇಳಿದ್ದಾರೆ. ಆಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಅಲ್ಲದೇ ಶಿಕ್ಷಕ ಬೇರೆ ಹುಡುಗಿಯ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ. ತಕ್ಷಣ ಪೋಷಕ ಮತ್ತು ಸ್ಥಳೀಯರು ಶಾಲೆಗೆ ಬಂದು ಆರೋಪಿ ಶಿಕ್ಷಕನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

11 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಶಾಲೆ ಮತ್ತು ಟ್ಯೂಷನ್‍ಗೆ ಬರುವ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿರುವ ವಿದ್ಯಾರ್ಥಿನಿಯರ ಹೆಸರು ಸಹ ನೆನಪಿಲ್ಲ ಎಂದು ಹೇಳಿದ್ದಾನೆ. ವರದಿಯ ಪ್ರಕಾರ ಆರೋಪಿ 2018ರಿಂದ ಈ ಕೃತ್ಯವನ್ನು ಮಾಡುತ್ತಿದ್ದಾನೆ. ಆದರೆ ಸಂತ್ರಸ್ತೆಯರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಇಬ್ಬರು ಬಾಲಕಿಯರು ಮಾತ್ರ ಆರೋಪಿಗೆ ತಿಳಿದಿದೆ ಎಂದು ಪೊಲೀಸ್ ಅಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.

ಆರೋಪಿ ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments are closed.