ಕರಾವಳಿ

ಕೊರೋನಾ – ಸಂಶಯಾಸ್ಪದ ರೋಗಿಗಳು ಪತ್ತೆಯಾದರೆ, ಕೌನ್ಸಿಲಿಂಗ್ ಮಾಡಿ ಅವರ ಇಚ್ಛೆಯ ಆಸ್ಪತ್ರೆಗೆ ದಾಖಲಿಸಿ : ಜಿಲ್ಲಾಧಿಕಾರಿ

Pinterest LinkedIn Tumblr

 

ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಮಾ. 10:  ಕೊರೋನಾ ರೋಗ ತಪಾಸಣೆ ಮತ್ತು ರೋಗಿಗಳ ನಿರ್ವಹಣೆ ಕುರಿತು ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋರೋನಾ ರೋಗ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಕಾಲೇಜುಗಳ, ವಿಮಾನನಿಲ್ದಾಣ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸುವ ಮಂಗಳೂರು ವಿಮಾನನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಆರೋಗ್ಯದ ಗೊಂದಲದ ಬಗ್ಗೆ ಪ್ರಸ್ತಾಪಿಸಿದ ಅವರು, ಜ್ವರ ಪೀಡಿತರು ಸಂಶಯಾಸ್ಪದವಾಗಿ ಕಂಡುಬಂದರೆ, ಅವರನ್ನು ವಿಮಾನ ನಿಲ್ದಾಣದಲ್ಲಿಯೇ ವೈದ್ಯರಿಂದ ಪರೀಕ್ಷೆ ನಡೆಸಿ , ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬರಬೇಕು. ಇಂತಹ ಸಂದರ್ಭದಲ್ಲಿ ಏರ್ ಪೋರ್ಟ್ ಅಧಿಕಾರಿಗಳೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಂಶಯಾಸ್ಪದ ರೋಗಿಗಳು ಪತ್ತೆಯಾದರೆ, ಅವರಿಗೆ ಕೌನ್ಸಿಲಿಂಗ್ ಮಾಡಿ ಮಾಹಿತಿ ನೀಡಬೇಕು. ರೋಗಿ ಬಯಸಿದರೆ, ಐಸೋಲೇಶನ್ ವಾರ್ಡ್ ಇರುವ ಅವರ ಇಚ್ಛೆಯ ಆಸ್ಪತ್ರೆಗೆ ದಾಖಲಾಗಬಹುದು. ಆದರೆ, ರೋಗಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದರೆ, ಸಾರ್ವಜನಿಕ ಆರೋಗ್ಯ ಸಂರಕ್ಷಿಸಲು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಂಗಳೂರು ವಿಮಾನನಿಲ್ದಾಣಕ್ಕೆ ಜಿಲ್ಲಾಡಳಿತ ವತಿಯಿಂದ ಹೆಚ್ಚುವರಿಯಾಗಿ ವೈದ್ಯರನ್ನು ನಿಯೋಜಿಸಲಾಗುವುದು. ಜಿಲ್ಲೆಯಲ್ಲಿರುವ ಖಾಸಗೀ ವೈದ್ಯಕೀಯ ಕಾಲೇಜುಗಳ ವೈದ್ಯರನ್ನು ಪ್ರತೀದಿನ ಪಾಳಿಯಂತೆ ಮಾರ್ಚ್ 10ರಿಂದಲೇ ನಿಯೋಜಿಸಲಾಗುವುದು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ವಿಮಾನನಿಲ್ದಾಣದಲ್ಲಿನ ವ್ಯವಸ್ಥೆಯನ್ನು ಪ್ರತೀದಿನ ಪರಿಶೀಲಿಸಿದ ವರದಿ ನೀಡಲು ಸಿಂಧೂ ರೂಪೇಶ್ ನಿರ್ದೇಶಿಸಿದರು.

ಪ್ರಯಾಣಿಕರು ಸಹಕರಿಸಿ:

ವಿದೇಶದಿಂದ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ವೈದ್ಯರ ತಪಾಸಣೆಗೆ ಸಹಕರಿಸಬೇಕು. ವೈದ್ಯರ ಸಲಹೆಗೆ ಸ್ಪಂದಿಸಿ ಅವರ ಸಲಹೆಯಂತೆ ಸಹಕರಿಸಬೇಕು. ಪ್ರಯಾಣಿಕರ ಎಲ್ಲಾ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸ್ಯಾಂಪಲ್ ಪರೀಕ್ಷೆಗೆ ;

ಭಾನುವಾರ ಮಂಗಳೂರು ವಿಮಾನನಿಲ್ದಾಣಕ್ಕೆ ವಿದೇಶದಿಂದ ಬಂದ ಪ್ರಯಾಣಿಕರೊಬ್ಬರು ಜ್ವರ ಪೀಡಿತರಾಗಿ ಕಂಡುಬಂದಿದ್ದು, ಅವರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ. ರೋಗಿಯು ಚಿಕಿತ್ಸೆಗೆ ಸಹಕಾರ ನೀಡುತ್ತಿದ್ದಾರೆ. ಅವರ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪರೀಕ್ಷೆಯ ವಿವರ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕೆ ಸಿದ್ಧತೆ ಕೈಗೊಂಡಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಿಖಂದರ್ ಪಾಶಾ, ಉಪವಿಭಾಗಾಧಿಕಾರಿ ಮದನ್ ಮೋಹನ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ವೆನ್ ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ವೈದ್ಯಕೀಯ ಕಾಲೇಜು ಪ್ರತಿನಿಧಿಗಳು, ಎನ್.ಎಂ.ಪಿ.ಟಿ. ವಿಮಾನ ನಿಲ್ದಾಣ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.