ಚಂಡೀಗಢ್: ಕೋವಿಡ್-19 ಮಹಾಮಾರಿಗೆ ಜಗತ್ತು ತತ್ತರಿಸಿ ಹೋಗಿದ್ದು, ಪಂಜಾಬ್ ನಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ದೇಶದಲ್ಲಿ ಕೋವಿಡ್-19 ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾದಂತಾಗಿದೆ.
ಅಲ್ಲದೇ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಬಂದ್ ಮಾಡುವಂತೆ ಪಂಜಾಬ್ ಸರ್ಕಾರ ಘೋಷಿಸಿದೆ.
ಮಾರ್ಚ್ 21ರಿಂದ ಬಸ್ , ಆಟೋ, ಟೆಂಪೋ ಸೇರಿದಂತೆ ಎಲ್ಲಾ ವಾಹನ ಸಂಚಾರ ನಿಷೇಧಿಸುವಂತೆ ಸೂಚಿಸಿದೆ. ಮಾರಕ ಕೋವಿಡ್-19 ವೈರಸ್ ಹಾವಳಿ ತಡೆಯಲು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಸಾರ್ವಜನಿಕರು ಕೂಡಾ 20ಕ್ಕಿಂತ ಹೆಚ್ಚು ಜನರು ಗುಂಪುಗೂಡಬಾರದು ಎಂದು ಸೂಚನೆ ನೀಡಿದೆ. ಎಲ್ಲಾ ಪರೀಕ್ಷೆಗಳನ್ನು ಪಂಜಾಬ್ ಸರ್ಕಾರ ಮುಂದೂಡಿದೆ. ಪರೀಕ್ಷೆಗಳ ಹೊಸ ವೇಳಾಪಟ್ಟಿಯನ್ನು ಏಪ್ರಿಲ್ 1ರಂದು ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ಹೇಳಿದೆ.
ದಿಲ್ಲಿಯಲ್ಲಿ ಹೋಟೆಲ್, ರೆಸ್ಟೋರೆಂಟ್ ಬಂದ್:
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜಧಾನಿಯಲ್ಲಿ ವಾಸವಾಗಿರುವ ಎಲ್ಲಾ ಜನರು ಮನೆಯಲ್ಲಿಯೇ ವಾಸ್ತವ್ಯ ಹೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ದಿಲ್ಲಿಯಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಹೋಮ್ ಡೆಲಿವರಿ ಸೇವೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಪರಿಸ್ಥಿತಿ ತಿಳಿಯಾಗುವವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಬಂದ್ ಮುಂದುವರಿಯಲಿದೆ. ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಹೇಳಿದರು. ಎಲ್ಲಾ ಸ್ಟೇಟ್ ಬಸ್ಸುಗಳು, ಅಂತಾರಾಜ್ಯ ಬಸ್ ಟರ್ಮಿನಲ್ಸ್ ಮತ್ತು ಮೆಟ್ರೋ ರೈಲುಗಳು ಸಂಚರಿಸಲಿವೆ. ಆದರೆ ವಯೋವೃದ್ಧರು ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದು, ಇನ್ನಿತರ ನಿವಾಸಿಗಳು ತುರ್ತು ಅಗತ್ಯಗಳಿಗೆ ಮಾತ್ರ ಪ್ರಯಾಣಿಸುವಂತೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
Comments are closed.