ರಾಷ್ಟ್ರೀಯ

ನಿರ್ಭಯಾ ಪ್ರಕರಣ: ನನ್ನ ಮಗ ಅಂತಹ ಕೆಲಸ ಮಾಡುವವನಲ್ಲ, ಈಗ ನನ್ನ ಹೋರಾಟ ಆರಂಭ: ಗುಪ್ತಾ ತಂದೆ

Pinterest LinkedIn Tumblr


ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ನನ್ನ ಮಗ ನಿರ್ದೋಷಿ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಆದರೆ ನನ್ನ ಹೋರಾಟ ಈಗ ಆರಂಭಗೊಂಡಿದೆ ಎಂದು ದೋಷಿ, ಗಲ್ಲಿಗೇರಿಸಲ್ಪಟ್ಟ ಪವನ್ ಗುಪ್ತಾ ತಂದೆ ಹೀರಾ ಲಾಲ್ ಗುಪ್ತಾ ತಿಳಿಸಿದ್ದಾರೆ.

ನಿರ್ಭಯಾಳ ತಂದೆ ಕಾನೂನು ಹೋರಾಟ ಅಂತ್ಯಗೊಂಡಿದೆ. ಆದರೆ ಈಗ ನನ್ನ ಹೋರಾಟ ಆರಂಭವಾಗಲಿದೆ ಎಂದು ಆಂಗ್ಲ ಮಾಧ್ಯಮವೊಂದರ ಜತೆ ಮಾತನಾಡುತ್ತ ಆಕ್ರೋಶ ಹೊರಹಾಕಿರುವುದಾಗಿ ವರದಿ ತಿಳಿಸಿದೆ.

ನಾನೀಗ ಕಾನೂನು ಹೋರಾಟ ನಡೆಸುವ ಮೂಲಕ ರೇಪಿಸ್ಟ್ ತಂದೆ ಎಂಬ ಸಮಾಜದಲ್ಲಿನ ಕಳಂಕವನ್ನು ಕಿತ್ತೊಗೆಯಬೇಕಾಗಿದೆ. ನನ್ನ ಮಗ ಯಾವತ್ತೂ ಅಂತಹ ಕೆಲಸ ಮಾಡುವವನಲ್ಲ ಎಂಬುದು ನನಗೆ ಗೊತ್ತು. ಈ ದೇಶದ ಜನರಿಗೆ ಸತ್ಯ ತಿಳಿಯುವವರೆಗೆ ನನ್ನ ಕಾನೂನು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ತಂದೆ (ಹಣ್ಣು ಮಾರಾಟಗಾರ) ಪ್ರತಿಕ್ರಿಯೆ ನೀಡಿದ್ದಾರೆ.

ಕೋರ್ಟ್ ಪಕ್ಷಪಾತಿಯಾಗಿದೆ. ಈಗ ನನ್ನ ಮಗ ಸಾವನ್ನಪ್ಪಿದ್ದಾನೆ. ಹೀಗಾಗಿ ಕೋರ್ಟ್ ನನ್ನ ಮನವಿಯನ್ನು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಲಿದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಜನರು ನನ್ನ ಮಾತನ್ನು ನಂಬಲೇ ಇಲ್ಲ. ಯಾಕೆಂದರೆ ಮಗನನ್ನು ಉಳಿಸಲು ಕಟ್ಟು ಕಥೆ ಹೇಳುತ್ತಿದ್ದಾನೆ ಎಂದು ತಿಳಿದುಕೊಂಡಿದ್ದರು. ಶುದ್ಧ ಮನಸ್ಸಿನಿಂದ ಸಾಕ್ಷ್ಯವನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಒಂದು ವೇಳೆ ಸತ್ಯ ಹೊರತರಲಾಗದಿದ್ದರೆ, ನಾನು ಈ ಕಳಂಕ ಹೊತ್ತು ಬದುಕಲು ಇಷ್ಟ ಪಡುವುದಿಲ್ಲ ಎಂದು ತಿಳಿಸಿದ್ದಾರೆ.

Comments are closed.