ವಾಷಿಂಗ್ಟನ್/ನವದೆಹಲಿ: ಜಾಗತಿಕ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಕೋವಿಡ್ 19 ಈಗ ವಿಶ್ವದ ಮೂಲೆ ಮೂಲೆಗಳನ್ನೂ ಶಟ್ ಡೌನ್ ಮಾಡಿಸಿದೆ. ಜಗತ್ತಿನೆಲ್ಲೆಡೆ ಹಾದಿ-ಬೀದಿಗಳು, ಹೆದ್ದಾರಿಗಳು, ಮನರಂಜನಾ ತಾಣಗಳು, ಪ್ರವಾಸಿ ಸ್ಥಳಗಳು ಜನಸಂಚಾರವಿಲ್ಲದೆ, ಭಣಗುಡುತ್ತಿವೆ. ವಿಮಾನ ಸಂಚಾರಗಳು ಸ್ಥಗಿತಗೊಂಡಿರುವ ಕಾರಣ, ದೇಶ-ದೇಶಗಳ ನಡುವೆ ಸಂಪರ್ಕವೇ ಇಲ್ಲದಂತಾಗಿದೆ. ಕಚೇರಿ ಸಭೆಗಳಿಗೆಂದು, ದುಡಿಯಲೆಂದು, ಪ್ರವಾಸಕ್ಕೆಂದು ವಿದೇಶಗಳಿಗೆ ತೆರಳಿದವರು ವಾಪಸ್ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಅತಂತ್ರರಾಗಿದ್ದಾರೆ.
ಒಟ್ಟಾರೆ ಸುಮಾರು 7 ಕೋಟಿ ಜನಸಂಖ್ಯೆಯಿರುವ ಅಮೆರಿಕದ ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮತ್ತು ಇಲಿನಾಯ್ಸಗಳಲ್ಲಿ ಜನರು ಮನೆಗಳಲ್ಲೇ ಬಂದಿಯಾಗಿದ್ದಾರೆ. ಕೊಲಂಬಿಯಾದಲ್ಲೂ ಜನರು ಹೊರಬರಲು ಹೆದರುತ್ತಿದ್ದಾರೆ. ಅಮೆರಿಕದಾದ್ಯಂತ ಕೋವಿಡ್ 19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆಯೇ, ನಾವು ಕೋವಿಡ್ 19 ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸುವತ್ತ ಮುನ್ನಡೆಯುತ್ತಿದ್ದೇವೆ ಎಂದು ಅಧ್ಯಕ್ಷ ಡೊನಾಲ್ಡ… ಟ್ರಂಪ್ ಘೋಷಿಸಿದ್ದಾರೆ. ಅಮೆರಿಕದಲ್ಲಿ ಈವರೆಗೆ ಸೋಂಕಿಗೆ 249 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 19 ಸಾವಿರದ ಗಡಿ ದಾಟಿದೆ.
ಶ್ವೇತಭವನಕ್ಕೂ ಎಂಟ್ರಿ: ಅಮೆರಿಕದ ಶ್ವೇತಭವನಕ್ಕೂ ವೈರಸ್ ಎಂಟ್ರಿ ಪಡೆದಿದೆ. ವೈಟ್ ಹೌಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಸಿಬ್ಬಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಪೈಕಿ ಒಬ್ಬರು ಉಪಾಧ್ಯಕ್ಷ ಮೈಕ್ ಪೆನ್ಸ್ ತಂಡದ ಸಿಬ್ಬಂದಿ ಎಂದು ಅವರ ಕಾರ್ಯಾಲಯವೇ ತಿಳಿಸಿದೆ.
ಶ್ವೇತಭವನದೊಳಗೆ ಸೋಂಕಿತರು ಪತ್ತೆಯಾಗಿದ್ದು ಇದೇ ಮೊದಲು. ಕಳೆದ ವಾರ ಟ್ರಂಪ್ ಅವರು ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದರಾದರೂ, ಅದರ ಫಲಿತಾಂಶ ನೆಗೆಟಿವ್ ಎಂದು ಬಂದಿತ್ತು.
ಆಫ್ರಿಕಾದ 40 ದೇಶಗಳಲ್ಲಿ ಸೋಂಕು
ಆಫ್ರಿಕಾದಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದ್ದು, ಆಫ್ರಿಕಾದ 54 ರಾಷ್ಟ್ರಗಳ ಪೈಕಿ ಕನಿಷ್ಠ 40 ದೇಶಗಳಿಗೆ ಸೋಂಕು ಪ್ರವೇಶಿಸಿದೆ. ಶ್ರೀಲಂಕಾ ಕೂಡ ವಾರಾಂತ್ಯ ಕರ್ಫ್ಯೂ ವಿಧಿಸಿದೆ. ಇನ್ನು ಇಟಲಿ, ಸ್ಪೇನ್, ಫ್ರಾನ್ಸ್ ಈಗಾಗಲೇ ಕೋವಿಡ್ 19 ಹೊಡೆತಕ್ಕೆ ತತ್ತರಿಸಿಹೋಗಿವೆ. ಬ್ರಿಟನ್ ಕೂಡ ವೈರಸ್ ವಿರುದ್ಧ ಹೋರಾಟ ಆರಂಭಿಸಿದೆ. ಇಲ್ಲಿ 177 ಮಂದಿ ಮೃತಪಟ್ಟು, 3,983 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ 19ನ ಕೇಂದ್ರ ಸ್ಥಾನವಾದ ಚೀನಾದಲ್ಲಿ ಸತತ 3ನೇ ದಿನವೂ ಒಂದೇ ಒಂದು ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ.
ಆದರೆ, ಇಲ್ಲಿ ಶನಿವಾರ 7 ಮಂದಿ ಕೋವಿಡ್ 19 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3255ಕ್ಕೇರಿದೆ. ಹೊಸ ಪ್ರಕರಣಗಳು ಪತ್ತೆಯಾಗುತ್ತಿಲ್ಲವಾದ್ದರಿಂದ ನಿಧಾನವಾಗಿ ಚೀನಾ ಸಹಜ ಸ್ಥಿತಿಗೆ ಮರಳಲಿದೆ ಎಂಬ ನಿರೀಕ್ಷೆ ಹುಟ್ಟಿದೆ.
ಪಾಕ್ ನಲ್ಲಿ 500 ದಾಟಿದ ಸೋಂಕಿತರು
ಪಾಕಿಸ್ತಾನದಲ್ಲಿ ಶನಿವಾರ ಕೋವಿಡ್ 19 ಸೋಂಕಿತರ ಸಂಖ್ಯೆ 510ಕ್ಕೇರಿದೆ. ಇರಾನ್ ನಿಂದ ಆಗಮಿಸಿದ ಯಾತ್ರಿಕರಲ್ಲಿ ಬಹುತೇಕ ಮಂದಿಗೆ ಸೋಂಕಿರುವುದು ದೃಢಪಟ್ಟ ಕಾರಣ, ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳ ಕಂಡುಬಂದಿದೆ. ಪರಿಸ್ಥಿತಿ ಬಿಗಡಾಯಿಸಿತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ(ಪಿಐಎ) ಮಾ.21ರಿಂದ 28ರವರೆಗೆ ವಿಮಾನಗಳ ಸಂಚಾರ ರದ್ದು ಮಾಡುವುದಾಗಿ ಘೋಷಿಸಿದೆ. ಇನ್ನು, ಮಾ.25ರಿಂದ ದೇಶಾದ್ಯಂತ ಸಂಚರಿಸುವ ರೈಲುಗಳ ಸಂಖ್ಯೆಯನ್ನೂ ತಗ್ಗಿಸುವುದಾಗಿ ರೈಲ್ವೆ ಸಚಿವ ರಶೀದ್ ಅಹ್ಮದ್ ಹೇಳಿದ್ದಾರೆ. 142ರ ಪೈಕಿ 34 ರೈಲುಗಳ ಸಂಚಾರ ಸದ್ಯಕ್ಕೆ ರ¨ªಾಗಲಿದೆ ಎಂದಿದ್ದಾರೆ.
ಭಾರತೀಯರಿಗೆ ಅಭಯ
ಭಾರತಕ್ಕೆ ವಾಪಸಾಗದೆ, ವಿದೇಶಗಳಲ್ಲಿ ಉಳಿದಿರುವ ಭಾರತೀಯರಿಗೆ ಆಯಾ ದೇಶಗಳ ರಾಯಭಾರ ಕಚೇರಿಗಳು ಅಭಯ ನೀಡಿವೆ. ನಿಮಗೆ ಎಲ್ಲ ರೀತಿಯ ನೆರವನ್ನೂ ಒದಗಿಸುವುದಾಗಿ ಸಹಾಯವಾಣಿ ಸಂಖ್ಯೆಗಳನ್ನೂ ಘೋಷಿಸಿವೆ. ಕೆನಡಾ, ಗ್ರೀಸ್, ಫಿನ್ಲಂಡ್, ಎಸ್ಟೋನಿಯಾ, ಇಸ್ರೇಲ…, ಜಪಾನ್, ವಿಯೆಟ್ನಾಂ, ಬಲ್ಗೇರಿಯಾ, ನಾರ್ತ್ ಮ್ಯಾಸೆಡೋನಿಯಾ, ರಷ್ಯಾ, ಕ್ಯೂಬಾ, ಬ್ರೆಜಿಲ…, ಸ್ವಿಜರ್ಲೆಂಡ್ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತೀಯರಿಗಾಗಿಯೇ ಕೆಲವೊಂದು ಸಲಹೆಗಳನ್ನು ನೀಡಿವೆ. ಫ್ರಾನ್ಸ್ ನಲ್ಲಿರುವ ಭಾರತದ ರಾಯಭಾರ ಕಚೇರಿಯು, ಪ್ಯಾರಿಸ್ ನಿಂದ ಹೊರಡಲಿರುವ ಕರ್ತಾ ಏì ವೇಸ್ ವಿಮಾನದ ಕುರಿತು ಮಾಹಿತಿ ನೀಡಿದ್ದು, ಪ್ಯಾರಿಸ್ ನಲ್ಲಿ ಸಿಲುಕಿರುವ ಭಾರತೀಯರು ಕೂಡಲೇ ಈ ವಿಮಾನ ಹತ್ತುವಂತೆ ಸೂಚಿಸಿದೆ. ಭಾರತದ ಪ್ರಯಾಣದ ಗಡುವು ಮುಗಿಯುವ ಮೊದಲೇ ಈ ವಿಮಾನ ಬಂದು ತಲುಪುವ ಕಾರಣ, ತತ್ ಕ್ಷಣವೇ ಕಾರ್ಯಪ್ರವೃತ್ತವಾಗುವಂತೆ ಸಲಹೆ ನೀಡಿದೆ.
ತುರ್ತು ನಿಧಿಗೆ ಹರಿದುಬಂತು ಹಣ
ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ಸಾರ್ಕ್ ಕೋವಿಡ್ 19 ತುರ್ತು ನಿಧಿಗೆ ಸಾರ್ಕ್ ರಾಷ್ಟ್ರಗಳೆಲ್ಲವೂ ಸಮ್ಮತಿ ಸೂಚಿಸಿದ್ದು, ಈಗ ಈ ನಿಧಿಗೆ ಹಣ ಹರಿದುಬರಲಾರಂಭಿಸಿವೆ. ಶನಿವಾರ ಅಫ್ಘಾನಿಸ್ತಾನ ಮತ್ತು ಮಾಲ್ಡೀವ್ಸ್ 1.2 ಶತಕೋಟಿ ಡಾಲರ್ ಮೊತ್ತವನ್ನು ಈ ನಿಧಿಗೆ ಕೊಡುಗೆಯಾಗಿ ನೀಡುವುದಾಗಿ ಘೋಷಿಸಿವೆ. ನೇಪಾಳ ಮತ್ತು ಭೂತಾನ್ ಶುಕ್ರವಾರವೇ ಕ್ರಮವಾಗಿ 10 ಲಕ್ಷ ಡಾಲರ್, 1 ಲಕ್ಷ ಡಾಲರ್ ಘೋಷಿಸಿದ್ದವು. ಕೋವಿಡ್ 19 ವೈರಸ್ ವಿರುದ್ಧ ಜಂಟಿ ಹೋರಾಟ ನಡೆಸುವ ಸಲುವಾಗಿ ಈ ನಿಧಿಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಪ್ರಧಾನಿ ಮೋದಿ ಸಾರ್ಕ್ ರಾಷ್ಟ್ರಗಳ ಮುಖಂಡರ ಮುಂದಿಟ್ಟಿದ್ದರು. ಅಲ್ಲದೆ, ಆರಂಭಿಕ ಮೊತ್ತವಾಗಿ 10 ದಶಲಕ್ಷ ಡಾಲರ್ ಮೊತ್ತವನ್ನು ಭಾರತದ ಪರವಾಗಿ ನೀಡಿದ್ದರು. 2 ರಾಷ್ಟ್ರಗಳ ತುರ್ತು ಸ್ಪಂದನೆಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
Comments are closed.