ರಾಷ್ಟ್ರೀಯ

ನಿರ್ಭಯಾ ಪ್ರಕರಣ: ಪೋಸ್ಟ್ ಮಾರ್ಟ್ಂ ನಂತರ ಶವಗಳು ಕುಟುಂಬಕ್ಕೆ ಹಸ್ತಾಂತರ

Pinterest LinkedIn Tumblr


ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿತರ ಶವಗಳನ್ನು ಅಂತಿಮ ಸಂಸ್ಕಾರ ನಡೆಸಲು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವಗಳನ್ನು ನೀಡಲಾಗಿತ್ತು ಎಂದು ವರದಿ ತಿಳಿಸಿದೆ.

ಮುಖೇಶ್ ಸಿಂಗ್ (32ವರ್ಷ), ಪವನ್ ಗುಪ್ತಾ (25ವರ್ಷ), ವಿನಯ್ ಶರ್ಮಾ (26ವರ್ಷ) ಮತ್ತು ಅಕ್ಷಯ್ ಕುಮಾರ್ ಸಿಂಗ್ (31ವರ್ಷ) ನನ್ನು ಶುಕ್ರವಾರ ಮುಂಜಾನೆ 5.30ಕ್ಕೆ ನೇಣಿಗೇರಿಸಲಾಗಿತ್ತು. ಜೈಲಿನ ನಿಯಮದ ಪ್ರಕಾರ ಶವಗಳನ್ನು ಸುಮಾರು ಅರ್ಧ ಗಂಟೆಗಳ ಕಾಲ ನೇತಾಡಿಸಲಾಗಿತ್ತು.

ನಂತರ ವೈದ್ಯರು ಶವಗಳ ಪರೀಕ್ಷೆ ನಡೆಸಿ ಸಾವನ್ನಪ್ಪಿರುವುದನ್ನು ಘೋಷಿಸಿದ್ದರು. ಆ ಬಳಿಕ ಶವಗಳನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಗಿತ್ತು. ಕೊನೆಗೆ ಶವಗಳನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಯಿತು ಎಂದು ತಿಹಾರ್ ಜೈಲ್ ಡೈರೆಕ್ಟರ್ ಜನರಲ್ ಸಂದೀಪ್ ಗೋಯಲ್ ತಿಳಿಸಿದ್ದಾರೆ.

ಅಕ್ಷಯ್ ಶವವನ್ನು ಕುಟುಂಬದ ಸದಸ್ಯರು ಬಿಹಾರದ ಔರಂಗಾಬಾದ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿರುವುದಾಗಿ ಜೈಲಿನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಮುಖೇಶ್ ಶವವನ್ನು ರಾಜಸ್ಥಾನಕ್ಕೆ ಹಾಗೂ ವಿನಯ್ ಮತ್ತು ಪವನ್ ಶವವನ್ನು ದಕ್ಷಿಣ ದೆಹಲಿಯ ರವಿದಾಸ್ ಕ್ಯಾಂಪ್ ನಲ್ಲಿರುವ ಮನೆಗೆ ತೆಗೆದುಕೊಂಡು ಹೋಗಿರುವುದಾಗಿ ವರದಿ ವಿವರಿಸಿದೆ.

Comments are closed.