ಕರ್ನಾಟಕ

ಕೊರೋನಾ ಭೀತಿ; SSLC ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳ ಮುಂದೂಡಿಕೆ: ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಕೊರೋನಾ ವೈರಸ್ ಸೋಂಕು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಮಾ. 27ರಿಂದ ನಿಗದಿಯಾಗಿದ್ದ ಎಸ್.ಎಸ್.ಎಲ್ ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹಾಗೂ ಡಾ.ದೇವಿಪ್ರಸಾದ್ ಅವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ತೀರ್ಮಾನ ಕೈಗೊಂಡಿದ್ದಾರೆ. ಇದರ ಜೊತೆಗೆ, ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಕಷ್ಟ.ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಯಬೇಕಿರುವುದು ನಮ್ಮ ಮುಂದಿರುವ ಸವಾಲಾಗಿದೆ. ಈ ನಿಟ್ಟಿನಲ್ಲಿ ಈ ತಿಂಗಳ 27ರಿಂದ ನಡೆಯಬೇಕಿದ್ದ ಹತ್ತನೇ ತರಗತಿ ಪರೀಕ್ಷೆ ಸೇರಿ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸರ್ಕಾರದ ಬಾಲಬ್ರೂಯಿ ಅತಿಥಿಗೃಹವನ್ನು ಕೊರೋನಾ ವಾರ್ ರೂಂ ಬಳಕೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾ ವೈರಸ್ ಸದ್ಯ ಹಳ್ಳಿಗಳಲ್ಲಿ ಅಷ್ಟೊಂದು ಪಸರಿಸಿಲ್ಲ, ಅಲ್ಲದೆ ಹಳ್ಳಿಗಳಲ್ಲಿ ಸೋಂಕು ಚಿಕಿತ್ಸೆಗಳಿಗೂ ಅಷ್ಟೊಂದು ಅನುಕೂಲಗಳಿರುವುದಿಲ್ಲ. ಹೀಗಾಗಿ ಇನ್ನು 15 ದಿನಗಳವರೆಗೆ ನಗರಗಳಿಂದ ಯಾರೂ ಪ್ರಯಾಣ ಮಾಡಬೇಡಿ. ತೀರಾ ಅಗತ್ಯವಿದ್ದರೆ ಮಾತ್ರ ಹಳ್ಳಿಗಳಿಗೆ ಹೋಗಿ ಎಂದು ಮುಖ್ಯಮಂತ್ರಿ ಜನತೆಗೆ ಮನವಿ ಮಾಡಿದ್ದಾರೆ.

ಇಂದು ಮಾತ್ರ ಜನತಾ ಕರ್ಫ್ಯೂ ಇದ್ದು ನಾಳೆಯಿಂದ ಎಂದಿನಂತೆ ದಿನಸಿ, ತರಕಾರಿ, ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ. ಸಾರಿಗೆ ಸಂಚಾರಗಳು ಸಹ ಎಂದಿನಂತೆ ಇರಲಿವೆ ಎಂದರು. ಕೊರೋನಾ ತಡೆಗೆ ರಾಜ್ಯದ ಗಡಿ ಭಾಗಗಳನ್ನು ಮುಚ್ಚಲಾಗುತ್ತದೆ ಎಂದರು.

ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯದ ಜನತೆ ಜನತಾ ಕರ್ಫ್ಯೂ ಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯ 1700 ಹಾಸಿಗೆಯ ವಿಶೇಷ ಸಮುಚ್ಚಯವನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್, ಖ್ಯಾತ ವೈದ್ಯ ಡಾ.ದೇವಿಪ್ರಸಾದ್ ಸೇರಿ ಪ್ರಮುಖರ ಜತೆ ಚರ್ಚಿಸಿ ಕೆಲವು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು ತಿಳಿಸಿದರು.

ವಿಕ್ಟೊರಿಯಾ ಆಸ್ಪತ್ರೆಯಲ್ಲಿನ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಆಸ್ಪತ್ರೆಯಲ್ಲಿ 1700 ಹಾಸಿಗೆಯ ವಿಶೇಷ ಸಮುಚ್ಚಯವನ್ನು ಸಂಪೂರ್ಣ ವಾಗಿ ಕೊರೊನಾ ಚಿಕಿತ್ಸೆಗೆ ಮೀಸಲಿಡಲಾಗುವುದು ಎಂದು ಹೇಳಿದರು.

Comments are closed.