ರಾಷ್ಟ್ರೀಯ

ಕೊರೋನಾ: ದೇಶದಲ್ಲಿ ಒಂದೇ ದಿನ ಮೂರು ಸಾವು; ಮೃತರ ಸಂಖ್ಯೆ 7ಕ್ಕೇರಿಕೆ

Pinterest LinkedIn Tumblr


ನವದೆಹಲಿ: ದೇಶದಲ್ಲಿ ಕೋವಿಡ್‌ 19 ಪೀಡಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಳವಾಗುತ್ತಿರುವಂತೆಯೇ, ಭಾನುವಾರ ಒಂದೇ ದಿನ ಮೂರು ಸಾವುಗಳೂ ಸಂಭವಿಸಿವೆ. ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್‌ನಲ್ಲಿ ಕೋವಿಡ್‌ 19 ಸೋಂಕಿದೆ ತುತ್ತಾದವರು ಮೃತಪಟ್ಟಿದ್ದಾರೆ. ಈ ಮೂಲಕ ಭಾರತದಲ್ಲಿ ಕೋವಿಡ್‌ 19ಗೆ ಬಲಿಯಾದವರ ಸಂಖ್ಯೆ 7ಕ್ಕೇರಿದಂತಾಗಿದೆ. ಒಟ್ಟು ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದ್ದು, 341 ಮಂದಿಗೆ ಸೋಂಕು ದೃಢಪಟ್ಟಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ 63 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಅಸುನೀಗಿದ್ದಾರೆ. ಇವರು ಎಚ್‌.ಎನ್‌.ರಿಲಯನ್ಸ್‌ ರಿಲಯನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನದ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟು ಇಬ್ಬರು ಕೊರೊನಾಗೆ ಬಲಿಯಾದಂತಾಗಿದೆ.

ಇನ್ನು, ಬಿಹಾರದಲ್ಲಿ ಕೋವಿಡ್‌ 19 ಗೆ ಮೊದಲ ಬಲಿಯಾಗಿದ್ದು, 38 ವರ್ಷದ ಯುವಕ ಸಾವಿಗೀಡಾಗಿದ್ದಾರೆ. ಮುಂಗೇರ್‌ ಜಿಲ್ಲೆಯ ಈ ಯುವಕನಿಗೆ ಮೂತ್ರಕೋಶದ ಸಮಸ್ಯೆಯೂ ಇತ್ತು. ಇತ್ತೀಚೆಗೆ ಅವರು ಕತಾರ್‌ನಿಂದ ವಾಪಸಾಗಿದ್ದರು. ಅವರಿಗೆ ರೋಗಲಕ್ಷಣ ಕಂಡುಬಂದ ಕಾರಣ, ಶುಕ್ರವಾರವಷ್ಟೇ ಪಾಟ್ನಾದ ಏಮ್ಸ… ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ದೇಶದಲ್ಲಿ ಮೃತಪಟ್ಟ ಅತ್ಯಂತ ಕಿರಿಯ ಕೋವಿಡ್‌ 19 ಸೋಂಕಿತರಾಗಿದ್ದಾರೆ. ಈವರೆಗೆ ಮೃತಪಟ್ಟ ಎಲ್ಲರೂ 60 ವರ್ಷ ವಯಸ್ಸು ದಾಟಿದವರೇ ಆಗಿದ್ದರು.

ಇದೇ ವೇಳೆ, ಗುಜರಾತ್‌ ನಲ್ಲಿ ಸೋಂಕು ದೃಢಪಟ್ಟಿದ್ದ 67 ವರ್ಷದ ವ್ಯಕ್ತಿ ಭಾನುವಾರ ಸೂರತ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದೆಹಲಿ ಮತ್ತು ಜೈಪುರಕ್ಕೆ ತೆರಳಿ ವಾಪಸಾಗಿದ್ದ ಈ ವ್ಯಕ್ತಿಯನ್ನು ಕಿಡ್ನಿ ಮತ್ತು ಅಸ್ತಮಾ ಸಮಸ್ಯೆ ಹಿನ್ನೆಲೆಯಲ್ಲಿ ಮಾ.17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರವಷ್ಟೇ ಅವರಿಗೆ ಕೋವಿಡ್‌ 19 ಸೋಂಕಿರುವುದು ದೃಢಪಟ್ಟಿತ್ತು. ಗುಜರಾತ್‌ ನಲ್ಲಿ ಈವರೆಗೆ ಒಟ್ಟು 17 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ.

ಇದೇ ವೇಳೆ, ಅಸ್ಸಾಂನಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದ್ದ ನಾಲ್ಕೂವರೆ ವರ್ಷದ ಬಾಲಕಿ ಈಗ ಗುಣಮುಖಳಾಗಿದ್ದು, ಆಕೆಯ ರಕ್ತದ ಪರೀಕ್ಷೆಯ ವರದಿಯಲ್ಲಿ ಕೋವಿಡ್‌ 19 ನೆಗೆಟಿವ್‌ ಎಂದು ಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ಹಿಮಾಂತ ಬಿಸ್ವ ಸರ್ಮಾ ಹೇಳಿದ್ದಾರೆ.

ಜಗತ್ತಿನಾದ್ಯಂತ 13 ಸಾವಿರ ಮಂದಿ ಬಲಿ: ಈಗಾಗಲೇ 169 ದೇಶಗಳಿಗೆ ವ್ಯಾಪಿಸಿರುವ ಕೋವಿಡ್‌ -19 ಸೋಂಕು ಒಟ್ಟಾರೆ 13 ಸಾವಿರ ಮಂದಿಯನ್ನು ಬಲಿಪಡೆದುಕೊಂಡಿದೆ. ಈವರೆಗೆ ಕನಿಷ್ಠ 3 ಲಕ್ಷ ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ವಿಶ್ವದ ಸುಮಾರು 100 ಕೋಟಿ ಜನರು ತಮ್ಮ ಮನೆಗಳಲ್ಲೇ ಬಂಧಿಯಾಗಿದ್ದಾರೆ. ಇಟಲಿಯಲ್ಲಿ 4,800 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಜಾಗತಿಕ ಸಾವಿನ ಪ್ರಮಾಣದ ಮೂರನೇ ಒಂದರಷ್ಟು ಸಾವು ಇಲ್ಲೇ ಆಗಿದೆ.

Comments are closed.