ರಾಷ್ಟ್ರೀಯ

ಒಬ್ಬನಿಗೆ ಕೊರೋನಾ ವೈರಸ್ ಸೋಂಕು ತಗಲಿದರೆ ಆತನಿಂದ ಏಕಕಾಲಕ್ಕೆ ನಾಲ್ವರಿಗೆ ಹರಡಬಹುದು

Pinterest LinkedIn Tumblr


ಹೊಸದಿಲ್ಲಿ: ‘ಒಬ್ಬ ಭಾರತೀಯನಿಗೆ ಕೋವಿಡ್ 19 ವೈರಸ್ ಸೋಂಕು ತಗಲಿದರೆ ಅದು ಆತನಿಂದ ಏಕಕಾಲಕ್ಕೆ ನಾಲ್ವರಿಗೆ ಹರಡಬಹುದು. ಹಾಗಾಗಿ ಸೋಂಕಿತರನ್ನು ಅಥವಾ ಸೋಂಕು ಶಂಕಿತರನ್ನು 3 ದಿನಗಳ ಕಾಲ ಸ್ವಯಂನಿರ್ಬಂಧಕ್ಕೆ ಒಳಪಡಿಸಿದರೆ ಸಾಕು, ಕೊರೊನಾ ಹರಡುವಿಕೆಯನ್ನು ಶೇ. 62ರಷ್ಟು ಕಡಿಮೆ ಮಾಡಬಹುದು.

ಮಿತಿಮೀರಿದ ಸಂದರ್ಭಗಳಲ್ಲಿ ಈ ಸೋಂಕನ್ನು ಶೇ. 89ರಷ್ಟು ಕಡಿಮೆಗೊಳಿಸಬಹುದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸಿದ್ಧಪಡಿಸಿರುವ ಗಣಿತಶಾಸ್ತ್ರ ಆಧಾರಿತ ಸಂಶೋಧನಾ ವರದಿಯೊಂದು ಹೇಳಿದೆ. ಬಹುಮುಖ್ಯವಾಗಿ ಇದು ಸಾಮಾಜಿಕ ಅಂತರ ಕಾಪಾಡುವುದರ ಪ್ರಯೋಜನಗಳನ್ನು ಅಂಕಿ-ಅಂಶಗಳ ಮೂಲಕ ಪ್ರಸ್ತುತಗೊಳಿಸಿದೆ.

ಈ ವರದಿಯನ್ನು ಫೆಬ್ರವರಿಯಲ್ಲಿ, ಅಂದರೆ ಸೋಂಕು ಆಗ ತಾನೇ ಭಾರತಕ್ಕೆ ಕಾಲಿಡುತ್ತಿದ್ದ ಸಂದರ್ಭದಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ ಈಗ ದೇಶದೆಲ್ಲೆಡೆ ಹರಡಿದೆ. ಸೋಂಕಿತರ ಸಂಖ್ಯೆ 515ನ್ನು ದಾಟಿದೆ.
ದೇಶವೇ ಲಾಕ್‌ಡೌನ್‌ ಆಗಿದೆ. ಹೀಗಿರುವಾಗ ಆರಂಭಿಕ ಹಂತದಲ್ಲಿ ತಯಾರಿಸಲಾದ ವರದಿ ಈಗ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಗೆ ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ರಮಣ ಆರ್‌. ಗಂಗಖೇಡ್ಕರ್‌ ಅವರು ಉತ್ತರಿಸಿದ್ದಾರೆ.

‘ಸೋಂಕು ಆರಂಭಿಕ ಹಂತದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ನಿಜ. ಆದರೆ ಸೋಂಕಿತರು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಜನರಿಗೆ ಹರಡುತ್ತಾರೆ ಎಂಬುದು ಬದಲಾಗದ ಸತ್ಯ. ಏಕೆಂದರೆ ಆ ವೈರಾಣು ಹರಡಿಕೊಳ್ಳುವ ವೇಗವನ್ನು ಲೆಕ್ಕ ಇಟ್ಟು ಈ ವರದಿ ಸಿದ್ಧಪಡಿಸಲಾಗಿದೆ. ಆ ವೇಗ ಬದಲಾಗುವುದಿಲ್ಲ. ಹಾಗಾಗಿ ಈ ವರದಿಯು ಸರ್ವಕಾಲಿಕ’ ಎಂದು ಅವರು ತಿಳಿಸಿದ್ದಾರೆ.

‘ಇದು ನಿರ್ದಿಷ್ಟ ಪ್ರಾಂತ್ಯ ಅಥವಾ ದೇಶದಲ್ಲಿ ರೋಗಾಣುಗಳ ಹರಡುವಿಕೆಯ ವೇಗವನ್ನು ಆರ್‌- ನಾಟ್‌ (R0) ಎಂದು ಸಾಂಕೇತಿಕವಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. 0 ಮೌಲ್ಯ 1 ಅಥವಾ ಅದಕ್ಕಿಂತ ಕೆಳಗಿದ್ದರೆ ವೈರಾಣುಗಳು ಸಾಯುವ ಹಂತದಲ್ಲಿವೆ ಎಂದರ್ಥ. ಆದರೆ ಈ ಮೌಲ್ಯ 2 ಅಥವಾ ಅದಕ್ಕಿಂತ ಹೆಚ್ಚಿದ್ದರೆ ವೈರಾಣುಗಳು ಅಪಾಯಕಾರಿ ಸ್ಥಿತಿಯಲ್ಲಿ ಹರಡುತ್ತಿವೆ ಎಂದರ್ಥ’ ಎಂದು ಡಾ| ರಮಣ ಅವರು ಹೇಳಿದ್ದಾರೆ.

Comments are closed.