ಕರಾವಳಿ

ಪೊಲೀಸ್ ಇಲಾಖೆ ಮನವಿಗೆ ತುರ್ತು ಸ್ಪಂದನೆ: ಡಾ. ಸುಧಾಮೂರ್ತಿಯವರಿಂದ ದ.ಕ ಜಿಲ್ಲೆಗೆ 28 ಲಕ್ಷ ರೂ.ಗಳ ತುರ್ತು ವೈದ್ಯಕೀಯ ಸಾಮಾಗ್ರಿ ರವಾನೆ

Pinterest LinkedIn Tumblr

ಮಂಗಳೂರು, ಮಾರ್ಚ್. 28 : ಮಾನವೀಯತೆ ಹಾಗೂ ಸಹಾಯ ಹಸ್ತ ಚಾಚುದರಲ್ಲಿ ಯಾವಾಗಲೂ ಮುಂದಿರುವ ಡಾ. ಸುಧಾಮೂರ್ತಿ ಅವರು ದ.ಕ ಜಿಲ್ಲೆಯ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಪೊಲೀಸ್ ಇಲಾಖೆಯ ಕೋರಿಕೆಗೆ ತಕ್ಷಣ ಸ್ಪಂದಿಸಿ 36 ಗಂಟೆಯೊಳಗೆ 28 ಲಕ್ಷ ರೂ.ಗಳ ತುರ್ತು ವೈದ್ಯಕೀಯ ಸಾಮಾಗ್ರಿಗಳನ್ನು ಜಿಲ್ಲೆಯ ಜನತೆಯ ನೆರವಿಗಾಗಿ ಕಳುಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸಾಮಾಗ್ರಿಗಳ ನೆರವಿಗಾಗಿ ದ.ಕ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸ್ ಇಲಾಖೆ ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರ ಬಳಿ ನೆರವು ನೀಡುವಂತೆ ವಿನಂತಿಸಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಡಾ. ಸುಧಾಮೂರ್ತಿ ಅವರು ದ.ಕ ಜಿಲ್ಲೆಯ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಶ್ರೀಮತಿ ಸುಧಾ ಮೂರ್ತಿ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ರಾಮದಾಸ್ ಕಾಮತ್ ಮತ್ತು ಅವರ ತಂಡಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಉಂಟಾದ ನೆರೆಪ್ರವಾಹ ಹಾಗೂ ಇನ್ನಿತರ ಸಂದರ್ಭದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರ, ಸಮಾಜಸೇವೆಯಲ್ಲಿ ಇನ್ಫೋಸಿಸ್ ತನ್ನದೆ ಆದ ನೆರವಿನ ಹಸ್ತ ಚಾಚುತ್ತಾ ಬಂದಿದೆ. ಮಾತ್ರವಲ್ಲದೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಕೊರೊನಾ ಚಿಕಿತ್ಸೆ ನಿರ್ವಹಣೆಗೆ ರಾಜ್ಯದ ಒಂದು ಆಸ್ಪತ್ರೆ ತಮಗೆ ವಹಿಸಿ ಕೊಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿರುವುದನ್ನು ಕೂಡ ಇಲ್ಲಿ ನೆನಪಿಸ ಬಹುದು.

Comments are closed.