ಪಶ್ಚಿಮಬಂಗಾಳ: ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಕೋವಿಡ್-19 ವೈರಸ್ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಹಿನ್ನಲೆಯಲ್ಲಿ 29 ವರ್ಷದ ಮಹಿಳೆಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕೊಲ್ಕತ್ತಾದ ವೈದ್ಯರೊಬ್ಬರಿಗೆ ಕೋವಿಡ್-19 ವೈರಸ್ ತಗುಲಿದ್ದು, ಇವರು ಸೋಂಕು ಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದರು ಎಂದು ನಕಲಿ ಬೆಂಗಾಲಿ ಪತ್ರಿಕೆಯೊಂದರ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಮಹಿಳೆ ವೈರಲ್ ಮಾಡಿದ್ದರು.
ಹಾಗಾಗಿ ರಾಜ್ಯ ಆರೋಗ್ಯ ಇಲಾಖೆ ಕೂಡಲೇ ಪ್ರಕರಣ ದಾಖಲು ಮಾಡಿತ್ತು.
ರಾಜ್ಯದಲ್ಲಿ ಯಾವುದೇ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿರುವ ದೃಢಪಟ್ಟಿಲ್ಲ. ಇದೊಂದು ವದಂತಿಯಾಗಿದ್ದು ಹಾಗಾಗಿ ಕೂಡಲೇ ಪ್ರಕರಣ ದಾಖಲಿಸಲಾಯಿತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಮಹಿಳೆ ಪ್ರಸಿದ್ಧ ಗಾಯಕಿಯಾಗಿದ್ದು ಹಲವಾರು ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. ಪೊಲೀಸರು ಈ ಮಹಿಳೆಯನ್ನು ಬಂಧಿಸಿದ್ದು ಕೋವಿಡ್-19 ವೈರಸ್ ಕುರಿತು ದಾಖಲಾದ ಮೊದಲ ಪ್ರಕರಣವೆನಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಈ ಮಹಿಳೆ ಕೋವಿಡ್-19 ಕುರಿತು ಹಾಡೊಂದನ್ನು ರಚಿಸಿದ್ದು, ಇದು ಕೂಡ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದ್ದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66c ಅಡಿಯಲ್ಲಿ ಮಹಿಳೆ ವಿರುದ್ದ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪೊಲೀಸ್ ಆಯುಕ್ತ ಅನೂಜ್ ಶರ್ಮಾ ರಾಜ್ಯದ ಜನರಿಗೆ ಎಚ್ಚರಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ 19 ವೈರಸ್ ಬಗ್ಗೆ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಿದರೇ ಅವರ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.
Comments are closed.