ಕರಾವಳಿ

ಕರೋನಾ ಆಸ್ಪತ್ರೆಯಾಗಿ ವೆನ್‍ಲಾಕ್ : ಮೆಡಿಕಲ್ ಕಾಲೇಜುಗಳಲ್ಲೂ ಆಯುಷ್ಮಾನ್ ಸೌಲಭ್ಯ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು ಎಪ್ರಿಲ್ 01 : ವೆನ್‍ಲಾಕ್ ಆಸ್ಪತ್ರೆಯನ್ನು ಕರೋನಾ ಚಿಕಿತ್ಸೆಗೆ ಸಂಪೂರ್ಣವಾಗಿ ಬಳಸಲಾಗುತ್ತಿರುವುದರಿಂದ ಜಿಲ್ಲೆಯ ಖಾಸಗೀ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗುತ್ತಿರುವ ಇತರೆ ಅರ್ಹ ರೋಗಿಗಳಿಗೆ ಆಯುಷ್ಮಾನ್ ಭಾರತ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ತಿಳಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೋನಾ ವೈದ್ಯಕೀಯ ನಿರ್ವಹಣೆ ಕುರಿತು ಖಾಸಗೀ ಮೆಡಿಕಲ್ ಕಾಲೇಜುಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಸರಕಾರ ಈ ಬಗ್ಗೆ ಅನುಮತಿ ನೀಡಿದ್ದು, ಅರ್ಹ ರೋಗಿಗಳಿಗೆ ಸಕಾಲದಲ್ಲಿ ಉತ್ತಮ ಚಿಕಿತ್ಸೆ ದೊರಕಲು ಆಯುಷ್ಮಾನ್ ಭಾರತ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಕರೋನಾ ಹಿನ್ನೆಲೆಯಲ್ಲಿ ಖಾಸಗೀ ವೈದ್ಯಕೀಯ ಕಾಲೇಜುಗಳು ಎಲ್ಲಾ ಅಗತ್ಯ ನೆರವು ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.

ಡಯಾಲಿಸಿಸ್ ಅಗತ್ಯವಿರುವವರಿಗೆ ಯಾವುದೇ ತೊಂದರೆಯಾಗದಂತೆ ಡಯಾಲಿಸಿಸ್ ಮಾಡಿಸಲು ಖಾಸಗೀ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊನ್ನುರಾಜ್ ಹೇಳಿದರು.
ಆಯುಷ್ಮಾನ್ ಭಾರತ್ ಸೌಲಭ್ಯವನ್ನು ತ್ವರಿತವಾಗಿ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದರು.

ವೆನ್‍ಲಾಕ್ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಕರೋನಾ ನಿರ್ವಹನೆಗೆ ತುರ್ತು ಯೋಜನೆಯನ್ನು ಸಿದ್ಧಗೊಳಿಸಲಾಗಿದೆ. ಶಂಕಿತ ರೋಗಿಗಳನ್ನು ಆರೋಗ್ಯ ಶಿಷ್ಟಾಚಾರಗಳಂತೆ ವಿವಿಧ ಚಿಕಿತ್ಸಾ ಪ್ರಕ್ರಿಯೆಗೊಳಪಡಿಸಲಾಗುತ್ತಿದೆ ಎಂದು ವೆನ್‍ಲಾಕ್ ಅಧೀಕ್ಷಕ ಡಾ. ಸದಾಶಿವ ತಿಳಿಸಿದರು.

ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಮತ್ತಿತರರು ಇದ್ದರು.

Comments are closed.