ಮಂಗಳೂರು, ಎಪ್ರಿಲ್.03: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿದ್ದರೂ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾವಣೆ ಮಾಡಿದ ಹಲವಾರು ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿರುವ ಮಂಗಳೂರು ಪೊಲೀಸರು ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶ ಜಾರಿಯಲ್ಲಿದ್ದು, ದ.ಕ.ಜಿಲ್ಲಾದ್ಯಂತ ಸೆ.144 (3)ನ್ನು ವಿಧಿಸಲಾಗಿದೆ. ಮಾತ್ರವಲ್ಲದೇ ಗುರುವಾರದಿಂದ ಯಾವುದೇ ಖಾಸಗಿ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅಗತ್ಯ ವಸ್ತುಗಳ ಖರೀದಿಗಾಗಿ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವ ಮಧ್ಯೆಯೇ ಕೆಲವರು ಬೇಕಾಬಿಟ್ಟಿ ಅವಧಿ ಮೀರಿ ವಾಹನ ಚಲಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆಯೊಂದಿಗೆ ಸೇರಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿತ್ತು.
ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿದ್ದರೂ ಶುಕ್ರವಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾವಣೆ ಮಾಡಿದ ಹಲವಾರು ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿರುವ ಮಂಗಳೂರು ಪೊಲೀಸರು ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೂಕ್ತ ಕಾರಣವಿಲ್ಲದೇ ಪಾಸ್ ಹೊಂದಿರದ ದ್ವಿಚಕ್ರ ವಾಹನ ಸವಾರರ ವಿರುದ್ಧ ಕೂಡ ಕೇಸು ದಾಖಲಿಸಿದ್ದಾರೆ.
ಕೊರೊನಾ ಲಾಕ್ಡೌನ್ ಆರಂಭವಾದ 2-3 ದಿನಗಳ ಕಾಲ ಜನರು ಲಾಕ್ಡೌನ್ ಜಾರಿಯಿದ್ದರೂ ರಸ್ತೆಯಲ್ಲಿ ತಿರುಗಾಡುತ್ತಿದ್ದು ಇದೀಗ ನಿರ್ಬಂಧವನ್ನು ಇನ್ನಷ್ಟು ಕಠಿಣ ಮಾಡಲಾಗಿದೆ. ಜಿಲ್ಲಾಡಳಿತ ಜನರ ಓಡಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುರುವಾರದಿಂದ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ. ನಗರದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ ಇಂದು ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಗರ ಪ್ರವೇಶಿಸುವ ವಾಹನಗಳ ಮೇಲೆ ಪೊಲೀಸರು ಹದ್ದುಕಣ್ಣಿನ ತಪಾಸಣೆ ನಡೆಸುತ್ತಿದ್ದಾರೆ.
ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ಅಗತ್ಯ ವಸ್ತು ಪೂರೈಕೆಯ ಅಂಗಡಿ ಮುಂಗಟ್ಟುಗಳು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿರುವುದರಿಂದ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿದ್ದರಿಂದ ಜನ ಸಂಚಾರ ವಿರಳವಾಗಿತ್ತು.
ಇಂದು ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೆ, ಒಳ ರಸ್ತೆಗಳಲ್ಲಿಯೂ ದ್ವಿಚಕ್ರ ವಾಹನ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ವಿರಳವಾಗಿದೆ. ಬಹುತೇಕ ಮಂದಿ ದಿನಸಿ ಸಾಮಗ್ರಿಗಳನ್ನು ಖರೀದಿಸಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂತು.
ಶುಕ್ರವಾರ ಬೆಳಗ್ಗೆ 7ರಿಂದ 12 ಗಂಟೆಯವರೆಗೆ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದ್ದರೂ ಅನಗತ್ಯ ಖಾಸಗಿ ವಾಹನಗಳ ಸಂಚಾರವನ್ನು ಮಾಡುವಂತಿಲ್ಲ. ಹಾಗಾಗಿ ಪೊಲೀಸರು ನಗರದ ಪಂಪ್ವೆಲ್ ಸರ್ಕಲ್, ಕಂಕನಾಡಿ ಸರ್ಕಲ್, ಅಂಬೇಡ್ಕರ್ (ಜ್ಯೋತಿ) ವೃತ್ತ, ಬಲ್ಮಠ ಸಕ್ರಲ್, ಲಾಲ್ ಭಾಗ್, ಕೆ ಎಸ್ ಆರ್ ಟಿಸಿ, ಮಣ್ಣಗುಡ್ಡ, ಕಾರ್ಸ್ಟ್ರೀಟ್, ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೇಲ್ ವೃತ್ತ, ಕ್ಲಾಕ್ ಟವರ್, ಪುರಭವನದಎದುರು, ಕೆ.ಎಸ್.ರಾವ್ ರಸ್ತೆ ಮೊದಲಾದ ಕಡೆಗಳಲ್ಲಿ ವಾಹನಗಳನ್ನು ತಪಾಸಣೆಗೊಳಪಡಿಸಿ ಪಾಸ್ ಇದ್ದಲ್ಲಿ ಮಾತ್ರವೇ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ.
ನಿಯಮ ಉಲ್ಲಂಘನೆ : ಒಂದೇ ದಿನ 154 ವಾಹನ ವಶಕ್ಕೆ
ಗುರುವಾರ ಮಧ್ಯಾಹ್ನ 12:30ರ ಬಳಿಕ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾವಣೆ ಮಾಡಿದ 154 ವಾಹನ ಚಾಲಕರು/ಸವಾರರ ಮೇಲೆ ಪ್ರಕರಣ ದಾಖಲಿಸಿರುವ ಮಂಗಳೂರು ಪೊಲೀಸರು ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರು ಗುರುವಾರ ಬೆಳಗ್ಗೆ ಟ್ವೀಟ್ ಮಾಡಿ ಮಧ್ಯಾಹ್ನ 12:30ರ ಬಳಿಕ ವಾಹನಗಳನ್ನು ಚಲಾಯಿಸಿದರೆ ಅವುಗಳನ್ನು ವಶಪಡಿಸಲಾಗುವುದು ಎಂದಿದ್ದರು. ಆದರೆ, ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸವಾರರು/ಚಾಲಕರು ವಾಹನ ಚಲಾಯಿಸಿದ್ದರು. ತುರ್ತು ಸೇವೆಗೆ ಸಂಬಂಧಿಸಿ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Comments are closed.