ಆರೋಗ್ಯ

ಶ್ವಾಸಕೋಶವನ್ನು ಆರೋಗ್ಯವಾಗಿರಿಸಲು ಏಳು ಮಾರ್ಗಗಳು

Pinterest LinkedIn Tumblr

ಶ್ವಾಸಕೋಶಗಳು ನಮ್ಮ ಶರೀರದ ಪ್ರಮುಖ ಅಂಗಗಳಾಗಿದ್ದು,ನಾವು ಚಟುವಟಿಕೆಯಿಂದಿರುವಂತೆ ಮಾಡುವಲ್ಲಿ ಅವು ಮಹತ್ವದ ಪಾತ್ರವನ್ನು ಹೊಂದಿವೆ. ಹೀಗಾಗಿ ಅವು ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸಲು ಏಳು ಮಾರ್ಗಗಳ ಕುರಿತು ಮಾಹಿತಿಗಳಿಲ್ಲಿವೆ.

ಧೂಮ್ರಪಾನವನ್ನು ನಿಲ್ಲಿಸಿ
ಧೂಮ್ರಪಾನದ ಕೆಡುಕುಗಳು ಎಲ್ಲರಿಗೂ ಗೊತ್ತು. ಅದು ಶ್ವಾಸಕೋಶಗಳಿಗ ಹಾನಿಯನ್ನುಂಟು ಮಾಡುವ ಜೊತೆಗೆ ಶ್ವಾಸಕೋಶ ಕ್ಯಾನ್ಸರ್‌ನಿಂದ ಹಿಡಿದು ಉಸಿರಾಟದ ಕಾಯಿಲೆಯವರೆಗೆ ಎಲ್ಲ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅದು ಖಂಡಿತವಾಗಿಯೂ ಶ್ವಾಸಕೋಶಗಳ ಸಾಮರ್ಥ್ಯವನ್ನು ತಗ್ಗಿಸುತ್ತದೆ. ನೀವು ಧೂಮ್ರಪಾನಿಗಳಾಗಿದ್ದರೆ ಅದನ್ನು ತಕ್ಷಣವೇ ವರ್ಜಿಸಿ. ಒಂಭತ್ತು ತಿಂಗಳ ಬಳಿಕ ನಿಮ್ಮ ಶ್ವಾಸಕೋಶಗಳ ಸಾಮರ್ಥ್ಯ ಕನಿಷ್ಠ ಶೇ.10ರಷ್ಟಾದರೂ ಸುಧರಣೆಯಾಗುತ್ತದೆ.

ಉಸಿರಾಟದ ವ್ಯಾಯಾಮಗಳನ್ನು ಮಾಡಿ
ನೀವು ಸುಲಭವಾಗಿ ಮಾಡಬಹುದಾದ ಹಲವಾರು ಉಸಿರಾಟದ ವ್ಯಾಯಾಮಗಳಿದ್ದು,ಅವು ಶ್ವಾಸಕೋಶಗಳನ್ನು ಆರೋಗ್ಯಯುತ ವಾಗಿರಿಸಲು ನೆರವಾಗುತ್ತವೆ. ನಿಂತುಕೊಂಡು ಬೆನ್ನನ್ನು ಹಿಂದಕ್ಕೆ ಚಾಚಿ ದೀರ್ಘವಾದ ಉಸಿರನ್ನೆಳೆದುಕೊಂಡು ಕನಿಷ್ಠ 10 ಸೆಕೆಂಡ್‌ಗಳ ಕಾಲ ಅದನ್ನು ಹಿಡಿದಿಟ್ಟುಕೊಳ್ಳುವುದು ಇಂತಹ ವ್ಯಾಯಾಮಗಳಲ್ಲೊಂದಾಗಿದೆ. ಇದಕ್ಕಾಗಿ ವಿಶೇಷ ಸಮಯ ಬೇಕಾಗಿಲ್ಲ,ನೀವು ಟಿವಿ ನೋಡುತ್ತಲೇ ಈ ಸರಳವಾದ ವ್ಯಾಯಾಮವನ್ನು ಮಾಡಬಹುದು.

ಸಾಕಷ್ಟು ವಿಟಾಮಿನ್ ಡಿ ಸೇವಿಸಿ
ಡಿ ವಿಟಾಮಿನ್‌ನ ಅಧಿಕ ಮಟ್ಟ ಶ್ವಾಸಕೋಶಗಳ ಉತ್ತಮ ಕಾರ್ಯ ನಿರ್ವಹಣೆಯೊಂದಿಗೆ ಗುರುತಿಸಿಕೊಂಡಿದೆ ಎನ್ನುವುದನ್ನು ಈವರ್ಷ ಬಿಡುಗಡೆಗೊಂಡ ಅಧ್ಯಯನ ವರದಿಯೊಂದು ಬೆಳಕಿಗೆ ತಂದಿದೆ. ಸೂರ್ಯನ ಬಿಸಿಲು ನಮ್ಮ ಶರೀರಕ್ಕೆ ವಿಟಾಮಿನ್ ಡಿ ಅನ್ನು ನೈಸರ್ಗಿಕವಾಗಿ ಒದಗಿಸುತ್ತದೆ. ಆದರೆ ಚಳಿಗಾಲದಲ್ಲಿ ಬಿಸಿಲು ಕಡಿಮೆಯಿದ್ದಾಗ ಒಂದಿಷ್ಟು ವಿಟಾಮಿನ್ ಡಿ ಮಾತ್ರೆಗಳಿಗಾಗಿ ದುಡ್ಡು ವ್ಯಯಿಸಿದರೆ ಅದು ವ್ಯರ್ಥವಾಗುವುದಿಲ್ಲ. ತೈಲಾಂಶ ಹೊಂದಿರುವ ಮೀನು,ಮೊಟ್ಟೆಯ ಹಳದಿ ಭಾಗ ಮತ್ತು ಕೆಂಪು ಮಾಂಸದಂತಹ ಆಹಾರಗಳೂ ನಮ್ಮ ಶರೀರಕ್ಕೆ ಡಿ ವಿಟಾಮಿನ್ ಒದಗಿಸುತ್ತವೆ.

ನಿಮ್ಮಳಗಿನ ಹಾಡುಗಾರನನ್ನು ಜಾಗ್ರತಗೊಳಿಸಿ
ನೀವು ಬಾತರೂಮ್ ಸಿಂಗರ್ ಆಗಿದ್ದರೆ ನಿಜಕ್ಕೂ ಸುದೈವಿಗಳು. ಏಕೆಂದರೆ ಹಾಡುವುದರಿಂದ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚುತ್ತದೆ. ಉಸಿರಾಟದ ಕಾಯಿಲೆಗಳಿದ್ದವರಿಗಂತೂ ಇದು ಉತ್ತಮ ಚಿಕಿತ್ಸೆಯನ್ನು ನೀಡುತ್ತದೆ.

ಕ್ರಿಯಾಶೀಲರಾಗಿರಿ
ತಮ್ಮ ಕ್ರೀಡಾಸಾಧನೆಯನ್ನು ಹೆಚ್ಚಿಸುವುದು ಜನರು ತಮ್ಮ ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕಾರಣಗಳಲೊಂದಾಗಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮ ಶ್ವಾಸಕೋಶಗಳು ಆಮ್ಲಜನಕವನ್ನು ಸ್ವೀಕರಿಸುತ್ತವೆ ಮತ್ತು ಅಂಗಾರಾಮ್ಲ ವಾಯುವನ್ನು ಹೊರಗೆ ಹಾಕುತ್ತವೆ. ನಾವು ವ್ಯಾಯಾಮ ಮಾಡುತ್ತಿದ್ದಾಗ ಈ ಪ್ರಕ್ರಿಯೆಯು ಹೆಚ್ಚಿನ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಶ್ವಾಸಕೋಶಗಳನ್ನು ಸದೃಢಗೊಳಿಸುತ್ತದೆ.

ನಿಮ್ಮ ಭಂಗಿಗಳು ಸರಿಯಾಗಿರಲಿ
ಕುರ್ಚಿಯಲ್ಲಿ ಕುಸಿದ ರೀತಿಯಲ್ಲಿ ಕುಳಿತುಕೊಳ್ಳುವುದು ಶ್ವಾಸಕೋಶಗಳ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಈ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಶ್ವಾಸಕೋಶಗಳು ಹಿಂಡಿದಂತಾಗುತ್ತವೆ ಮತ್ತು ಸಂಕುಚಿತಗೊಳ್ಳುತ್ತವೆ. ಹೀಗಾಗಿ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚುವಂತಾಗಲು ನಾವು ಯಾವಾಗಲೂ ನೇರವಾಗಿ ಕುಳಿತುಕೊಳ್ಳಬೇಕು. ಕುಳಿತುಕೊಳ್ಳುವ ಉತ್ತಮ ಭಂಗಿಯು ಬೆನ್ನುನೋವಿನಿಂದಲೂ ಮುಕ್ತಿ ನೀಡುತ್ತದೆ.

ಮನೆಯಲ್ಲಿ ವಾಯು ಗುಣಮಟ್ಟ ಚೆನ್ನಾಗಿರಲಿ
ನೀವು ನಗರವಾಸಿಗಳಾಗಿದ್ದರೆ ವಾಯು ಮಾಲಿನ್ಯದಿಂದ ಪಾರಾಗಲು ಸಾಧ್ಯವಿಲ್ಲ. ಅಲ್ಪಕಾಲದ ವಾಯುಮಾಲಿನ್ಯವೂ ನಿಮ್ಮ ಶ್ವಾಸ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಆದರೆ ಮನೆಯಲ್ಲಿನ ವಾಯು ಗುಣಮಟ್ಟವನ್ನು ಉತ್ತಮಗೊಳಿಸಲು ಮಾರ್ಗಗಳಿವೆ. ಮನೆಯಲ್ಲಿ ಧೂಳುಮುಕ್ತ ಗಾಳಿಯಾಡುವಂತಿದ್ದರೆ ಒಳ್ಳೆಯದು. ಒಳಾಂಗಣ ಗಿಡಗಳು ವಾಯುವನ್ನು ತಾಜಾ ಆಗಿರಿಸುತ್ತವೆ. ಹೊರಗಿನ ಮಾಲಿನ್ಯ ಮಟ್ಟವು ಕಡಿಮೆಯಿದ್ದ ದಿನಗಳಲ್ಲಿ ಮನೆಯ ಕಿಡಕಿಗಳನ್ನು ತೆರೆದಿಡಲು ಮರೆಯಬೇಡಿ.

Comments are closed.