ರಾಷ್ಟ್ರೀಯ

ಕರ್ನಾಟಕ, ರಾಜಸ್ಥಾನದಲ್ಲಿ ಇಬ್ಬರು ಕೊರೋನಾಗೆ ಬಲಿ; ಸಾವಿನ ಸಂಖ್ಯೆ 68ಕ್ಕೆ ಏರಿಕೆ

Pinterest LinkedIn Tumblr

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್​ ಹಾವಳಿ ಹೆಚ್ಚಾಗುತ್ತಲೇ ಇದೆ. ಇಂದು ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಇಂದು ಇಬ್ಬರು ವ್ಯಕ್ತಿಗಳು ಕೊರೋನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 2902 ಕೊರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು 183 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 423ಕ್ಕೆ ಏರಿಕೆಯಾಗಿದ್ದು, ಅಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಒಟ್ಟು 411 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 386ಕ್ಕೆ ಏರಿಕೆಯಾಗಿದ್ದು, ಒಟ್ಟು 6 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇನ್ನು, ಕರ್ನಾಟಕದಲ್ಲಿ 128 ಕೊರೋನಾ ಕೇಸ್​ಗಳು ದೃಢಪಟ್ಟಿದ್ದು, ಈವರೆಗೆ 4 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ 75 ವರ್ಷದ ವೃದ್ಧ ನಿನ್ನೆ ತಡರಾತ್ರಿ ಕೊರೋನಾಗೆ ಬಲಿಯಾಗಿದ್ದಾನೆ. ಆ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಮೃತ ವ್ಯಕ್ತಿ ಯಾವುದೇ ವಿದೇಶ ಪ್ರಯಾಣ ಮಾಡಿರುವ ಇತಿಹಾಸ ಹೊಂದಿಲ್ಲ. ಜೊತೆಗೆ ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲೂ ಭಾಗವಹಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು, ರಾಜಸ್ಥಾನದ ಬಿಕನೇರ್​​ನಲ್ಲಿ 60 ವರ್ಷದ ಮಹಿಳೆ ಕೊರೋನಾ ಸೋಂಕು ತಗುಲಿ ಸಾವನ್ನಪ್ಪಿದ್ದಾನೆ. ಈಕೆಯೂ ಸಹ ವಿದೇಶ ಪ್ರಯಾಣ ಮಾಡಿರುವ ಇತಿಹಾಸ ಹೊಂದಿಲ್ಲ ಎಂದು ತಿಳಿದು ಬಂದಿದೆ. ಇಲ್ಲಿ ಹೊಸದಾಗಿ 17 ಪ್ರಕರಣಗಳು ಪತ್ತೆಯಾಗಿದ್ದು, 196ಕ್ಕೆ ಏರಿಕೆಯಾಗಿದೆ. ಅವರಲ್ಲಿ 41 ಮಂದಿ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ಇನ್ನು, ಈಶಾನ್ಯ ರಾಜ್ಯಗಳಲ್ಲೂ ಸಹ ಕೊರೋನಾ ಪ್ರಹಾರ ಹೆಚ್ಚಾಗಿದೆ. ಅಸ್ಸಾಂನಲ್ಲಿ ಇದುವರೆಗೆ 24 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 23 ಮಂದಿ ದೆಹಲಿಯ ನಿಜಾಮುದ್ದೀನ್​ ಸಭೆಯಲ್ಲಿ ಭಾಗವಹಿಸಿದ್ದವರು ಎಂದು ತಿಳಿದು ಬಂದಿದೆ. ಮಣಿಪುರದಲ್ಲಿ 2 ಕೊರೋನಾ ಪ್ರಕರಣಗಳು, ಮಿಜೋರಾಂನಲ್ಲಿ 1, ಅರುಣಾಚಲ ಪ್ರದೇಶದಲ್ಲಿ 1 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

Comments are closed.