ನವದೆಹಲಿ(ಏ. 04): ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್ಡೌನ್ ಇದೆ. ಇದು ಮುಗಿಯಲು ಇನ್ನು 10 ದಿನ ಇದೆ. ಲಾಕ್ಡೌನ್ ತೆರವುಗೊಳಿಸಲು ಕೇಂದ್ರ ಸರ್ಕಾರ ವಿವಿಧ ಮಾರ್ಗೋಪಾಯಗಳನ್ನ ಶೋಧಿಸುತ್ತಿದೆ. ಈ ಹೊತ್ತಿನಲ್ಲಿ ಅಮೆರಿಕದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಇನ್ನೂ ಹಲವು ದಿನಗಳ ಕಾಲ ನಿರ್ಬಂಧಗಳನ್ನು ಮುಂದುವರಿಸಬೇಕಾಗಬಹುದು. ಜೂನ್ 4ನೇ ವಾರದಿಂದ ಸೆಪ್ಟೆಂಬರ್ ಮೊದಲ ವಾರದವರೆಗಿನ ಅವಧಿಯಲ್ಲಿ ಲಾಕ್ ಡೌನ್ ತೆರವು ಕಾರ್ಯ ಪ್ರಾರಂಭವಾಗಬಹುದು ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಎಸ್ಜಿ) ಅಭಿಪ್ರಾಯಪಟ್ಟಿದೆ.
ಲಾಕ್ ಡೌನ್ ಯಾಕೆ ಮುಂದುವರಿಸಬೇಕಾಗಬಹುದು ಎಂಬುದಕ್ಕೆ ಈ ಸಂಸ್ಥೆ ಕಾರಣಗಳನ್ನ ಪತ್ತೆ ಮಾಡಿದೆ. ಭಾರತದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಮತ್ತು ಸರ್ಕಾರದ ನೀತಿ ಎಷ್ಟು ಸಮರ್ಪಕವಾಗಿ ಅನುಷ್ಠಾನವಾಗಬಹುದು ಎಂಬುದನ್ನು ಪರಿಗಣಿಸಿ ಒಂದು ಅಂದಾಜಿಗೆ ಬಂದಿದೆ. ಈ ಸಂಸ್ಥೆಯ ಪ್ರಕಾರ, ಜೂನ್ 3ನೇ ವಾರದಂದು ಅತಿ ಹೆಚ್ಚು ಕೊರೋನಾ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.
ಕೊವಿಡ್-19 ರೋಗದ ಸೋಂಕು ಪಸರುವಿಕೆ ಮೂರನೇ ಹಂತಕ್ಕೆ ಅಡಿ ಇಡುವ ಸೂಚನೆ ಸಿಗುತ್ತಿದ್ದಂತೆಯೇ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನ ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿದರು. ಬ್ರಿಟನ್, ಪೊಲೆಂಡ್, ಕೊಲಂಬಿಯಾ ಸೇರಿದಂತೆ ಹಲವು ದೇಶಗಳೂ ಕೂಡ ಲಾಕ್ ಡೌನ್ ಕ್ರಮ ಜಾರಿಗೆ ತಂದಿವೆ.
ಭಾರತದಲ್ಲಿ ಈವರೆಗೆ 68 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. 2,900ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಅಮೆರಿಕ, ಇಟಲಿ, ಸ್ಪೇನ್, ಬ್ರಿಟನ್ ಮೊದಲಾದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅನಾಹುತ ಕಡಿಮೆ ಎಂಬುದು ಮೇಲ್ನೋಟಕ್ಕೆ ತೋರಬಹುದು. ಆದರೆ, ಭಾರತದಲ್ಲಿ ವ್ಯಾಪಕ ಪರೀಕ್ಷೆ ನಡೆಯುತ್ತಿಲ್ಲ. ಪರೀಕ್ಷಾ ಕಿಟ್ಗಳ ಕೊರತೆಯೂ ಇದೆ. ವೈದ್ಯಕೀಯ ಮೂಲಸೌಕರ್ಯ ಕಡಿಮೆ ಇದೆ. ಹೀಗಾಗಿ, ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. ಒಮ್ಮೆ ವ್ಯಾಪಕ ಪರೀಕ್ಷೆಯಾದರೆ ನೈಜ ಚಿತ್ರಣ ಸಿಗಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
Comments are closed.