ಬೆಂಗಳೂರು: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಬರೋಬ್ಬರಿ 16 ಜನರಿಗೆ ಕೊರೊನಾ ಸೋಂಕು ಇರುವುದು ಖಚಿತಪಟ್ಟಿದೆ. ಮೈಸೂರಿನಲ್ಲಿ 7 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ, ಬೆಂಗಳೂರಿನಲ್ಲಿ 5 ಜನರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ ಮೂರು, ಬಳ್ಳಾರಿಯ ಹೊಸಪೇಟೆಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 144ಕ್ಕೆ ಏರಿದೆ.
144 ಜನರಲ್ಲಿ ನಾಲ್ವರು ಸಾವನ್ನಪ್ಪಿದ್ದರೆ 11 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಬ್ಬರು ಗರ್ಭಿಣಿ ಸೇರಿ 129ರಲ್ಲಿ 126 ರೋಗಿಗಳ ಆರೋಗ್ಯವು ಸ್ಥಿರವಾಗಿದೆ. ಮೂವರು ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 43ನೇ ರೋಗಿಗೆ ಆಕ್ಸಿಜನ್ ಮತ್ತು 101 ಹಾಗೂ 102ನೇ ರೋಗಿಗಳಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿದಿದೆ. ಆದರೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಯಾರೂ ವೆಂಟಿಲೇಟರ್ ಸಂಪರ್ಕದಲ್ಲಿ ಇಲ್ಲ ಎಂದು ಪ್ರತಿಪಾದಿಸಿದ್ದರು.
129 – ಬೆಂಗಳೂರು ನಗರದ 21 ವರ್ಷದ ಪುರುಷರಾಗಿದ್ದಾರೆ. ಇವರು 58ನೇ ರೋಗಿಯ ಸಂಪರ್ಕಿತರಾಗಿದ್ದು ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
130 – 52 ವರ್ಷದ ಬೆಂಗಳೂರಿನ ಪುರುಷರಾಗಿರುವ ಇವರು 58 ನೇ ರೋಗಿಯ ತಂದೆಯಾಗಿದ್ದಾರೆ. ಇವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
131 – ಬೆಂಗಳೂರು ನಗರದ 43 ವರ್ಷದ ಪುರುಷರಾಗಿರುವ ಇವರು 101 ರೋಗಿಯ ಪುತ್ರರಾಗಿದ್ದಾರೆ. ಇವರಿಗೆ ನಗರದ ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
132 – ಬೆಂಗಳೂರು ನಗರದ 78 ವರ್ಷದ ಪುರುಷರಾಗಿರುವ ಇವರು ಮಾರ್ಚ್ 17 ರಂದು ದುಬೈನಿಂದ ನಗರಕ್ಕೆ ಹಿಂದುರುಗಿದ್ದರು. ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ಮುಂದುವರಿದಿದೆ.
ಬೆಳಗಾವಿಯ ಮೂವರಿಗೆ ಕೊರೊನಾ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆ
133 – ಕೇರಳ ಕೊಚ್ಚಿ ಮೂಲದ 60 ವರ್ಷದ ಪುರುಷರಾಗಿರುವ ಇವರಿಗೆ ಜರ್ಮನಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಕಾಶ್ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆಗೆ ಒಳಗಾಗಿದ್ದಾರೆ.
134, 135, 136, 137 & 138 – ಕ್ರಮವಾಗಿ 38, 19, 39, 39 ಮತ್ತು 54 ವರ್ಷದ ಮೈಸೂರಿನ ಪುರುಷರಾಗಿದ್ದಾರೆ. ಇವರೆಲ್ಲರಿಗೂ ದಿಲ್ಲಿ ಪ್ರಯಾಣ ಬೆಳೆಸಿದ ಇತಿಹಾಸವಿದ್ದು ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಐವರು ಮೈಸೂರು ನಿವಾಸಿಗಳಲ್ಲ ಬದಲಿಗೆ ದಿಲ್ಲಿಯ ನಿವಾಸಿಗಳು. ಹಾಗೂ ನಿಜಾಮುದ್ದೀನ್ ತಬ್ಲೀಗ್ನಲ್ಲಿ ಇವರು ಯಾರೂ ಪಾಲ್ಗೊಂಡಿರಲಿಲ್ಲ ಎಂಬುದಾಗಿ ಮೈಸೂರು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
139 – 40 ವರ್ಷ ವಯಸ್ಸಿನ ಮೈಸೂರಿನ ಪುರುಷರಾಗಿದ್ದಾರೆ. ಇವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯೂ ಇಲ್ಲ. ಇವರಿಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತನಿಖೆ ಜಾರಿಯಲ್ಲಿದೆ. ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆಗೆ ದಾಖಲಾಗಿದ್ದಾರೆ.
140 – 34 ವರ್ಷದ ಪುರುಷರಾಗಿರುವ ಇವರು ನಂಜನಗೂಡಿನ ಜ್ಯುಬಿಲಿಯೆಂಟ್ ಔಷಧ ಕಾರ್ಖಾನೆಯ 109ನೇ ರೋಗಿಯ ಸಂಪರ್ಕಿತರಾಗಿದ್ದಾರೆ. ಇವರಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
141 – 47 ವರ್ಷದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮಹಿಳೆ. ಈಕೆಗೂ ಪ್ರಯಾಣದ ಹಿನ್ನೆಲೆ ಇಲ್ಲ. ಹಾಗಾಗಿ ಸೋಂಕು ತಗುಲಿದ್ದು ಹೇಗೆ ಎಂಬುದರ ಬಗ್ಗೆ ವಿಸ್ತೃತ ತನಿಖೆ ಜಾರಿಯಲ್ಲಿದೆ. ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿದೆ.
142 – 63 ವರ್ಷದ ಉಡುಪಿ ಮೂಲದ ಮಹಿಳೆಯಾಗಿರುವ ಇವರಿಗೆ ದುಬೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಇದೆ. ಮಾರ್ಚ್ 22 ರಂದು ಇವರು ಭಾರತಕ್ಕೆ ಬಂದಿದ್ದರು. ಮಂಗಳೂರು ನಗರದ ಇಎಸ್ಐ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
143 & 144 – ಕ್ರಮವಾಗಿ 43 ಮತ್ತು 52 ವರ್ಷದ ಪುರುಷರಾಗಿರುವ ಇವರು ದಿಲ್ಲಿಯ ತಬ್ಲೀಗ್ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಕ್ಷಿಣದ ಕನ್ನಡ ಜಿಲ್ಲೆಗೆ ಸೇರಿದ ಇವರಿಗೆ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉಡುಪಿ ಮೂಲದ 142ನೇ ರೋಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಇವರನ್ನು ದಕ್ಷಿಣ ಕನ್ನಡಕ್ಕೆ ಸೇರಿಸಲಾಗಿದೆ. 133ನೇ ರೂಗಿಯ ಕೇರಳ ಮೂಲದವರಾದರೂ ಅವರೀಗ ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರನ್ನು ಅದೇ ಜಿಲ್ಲೆಗೆ ಸೇರಿಸಲಾಗಿದೆ.
Comments are closed.