ಉಡುಪಿ: ಪ್ರಸ್ತುತ ಉಡುಪಿ ಜಿಲ್ಲೆಗೆ ಹೊರ ಜಿಲ್ಲೆಯಿಂದ ಬರುವ ವಾಹನಗಳು ಮತ್ತು ಪ್ರಯಾಣಿಕರನ್ನು ನಿರ್ಭಂದಿಸಲಾಗಿದ್ದು, ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ವ್ಯಕ್ತಿಗಳಿಗೆ ಮತ್ತು ಸರಕು ಸಾಮಗ್ರಿ ಸಾಗಿರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಿದ್ದು, ಇತರೆ ಜಿಲ್ಲೆಗಳಿಂದ ಪಾಸ್ ಪಡೆದು ಜಿಲ್ಲೆಗೆ ಬರಲು ಯತ್ನಿಸುವವರ ಪಾಸ್ ಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ನಿಯಂತ್ರಣದಲ್ಲಿದ್ದು, ಜಿಲ್ಲೆಯೊಳಗೆ ಕೊರೋನಾ ಕಂಡು ಬರುವ ಸಾಧ್ಯತೆ ಅತ್ಯಂತ ಕಡಿಮೆ ಇದ್ದು, ಹೊರ ಜಿಲ್ಲೆಯಿಂದ ಬರುವವರ ಮೂಲಕ ಮಾತ್ರ ಕಂಡು ಬರುವ ಸಾದ್ಯತೆಗಳಿದೆ. ಸಾರ್ವಜನಿಕರು ಜಿಲ್ಲೆಯೊಳಗೆ ಪ್ರವೇಶಿಸಲು ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಬರುತ್ತಿದ್ದು ಗಮನಕ್ಕೆ ಬಂದಿದ್ದು, ಜಿಲ್ಲೆಯ ನಾಗರೀಕರ ಆರೋಗ್ಯದ ದೃಷ್ಠಿಯಿಂದ , ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಜಿಲ್ಲೆಯೊಳಗೆ ಪ್ರವೇಶಿಸುವವರಿಗೆ ಯಾವುದೇ ಕಾರಣಕ್ಕೂ ಚೆಕ್‍ಪೋಸ್ಟ್ ಗಳಲ್ಲಿ ಅನುಮತಿ ನೀಡುವುದಿಲ್ಲ ಹಾಗೂ ಅಂತಹ ಪಾಸ್ ಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಯಾರಾದರೂ ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶ ಮಾಡಿದಲ್ಲಿ , ಅವರನ್ನು 14 ದಿನಗಳ ಸರ್ಕಾರಿ ಕ್ವಾರಂಟೈನ್ ಗೆ ಒಳಪಡಿಸುವುದಾಗಿ ಎಚ್ಚರಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಮತ್ತು ಅತ್ಯಂತ ಗಂಭೀರ ಮತ್ತು ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಂಡಿರುವ , ಜಿಲ್ಲಾಡಳಿತ ಕೈಗೊಂಡಿರುವ ಈ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಹಾಗೂ ಅಕ್ರಮವಾಗಿ ಒಳಬಂದವರಿಗೆ ಕಡ್ಡಾಯವಾಗಿ 14 ದಿನಗಳ ಸರ್ಕಾರಿ ಕ್ವಾರಂಟೈನ್ ವಿಧಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದರು.
ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಸಂಬಂದಪಟ್ಟ ತಹಸೀಲ್ದಾರ್ ಗಳು ಮತ್ತು ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಇತರೆ ಜಿಲ್ಲೆಗಳಿಂದ ನೀಡಿದ ಪಾಸ್ ಗಳನ್ನು ಮಾನ್ಯ ಮಾಡದಂತೆ ಮತ್ತೋಮ್ಮೆ ಸೂಚಿಸಿದರು. ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಜಿ.ಜಗದೀಶ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.