ಮಂಗಳೂರು, ಎಪ್ರಿಲ್ .17: ಕಳೆದ 12 ದಿನಗಳಿಂದ ನೆಮ್ಮದಿಯಿಂದ ಇದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13ನೇ ಕೊರೋನ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮೊತ್ತೊಮ್ಮೆ ಆತಂಕವನ್ನುಂಟು ಮಾಡಿದೆ. ದೆಹಲಿಗೆ ತೆರಳಿದ್ದ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿ 39 ವರ್ಷದ ಯುವಕನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಉಪ್ಪಿನಂಗಡಿ ವ್ಯಕ್ತಿಯೊಬ್ಬರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದ್ದು, ಜಿಲ್ಲೆಯಲ್ಲಿ ಕೊರೋನ ದೃಢಪಟ್ಟ 13ನೇ ಪ್ರಕರಣ ಇದಾಗಿದೆ.
ಇತ್ತೀಚೆಗೆ ದಿಲ್ಲಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಹೊಂದಿರುವ 39 ವರ್ಷದ ಈ ವ್ಯಕ್ತಿಯನ್ನು 14 ದಿನಗಳ ಕ್ವಾರಂಟೈನ್‌ಗಾಗಿ ಜಿಲ್ಲಾಡಳತವು ಎಪ್ರಿಲ್ 1ರಿಂದ ಕ್ವಾರಂಟೈನ್ ಕೇಂದ್ರದಲ್ಲಿರಿಸಿದೆ. ಮಾ.20ರಂದು ನಿಜಾಮುದ್ದೀನ್ ರೈಲಿನಲ್ಲಿ ಹೊರಟ ಈತ ಮಾ.21ರಂದುಮಂಗಳೂರಿಗೆ ಆಗಮಿಸಿದ್ದು, ಫೋನ್ ಟವರ್ ಲೊಕೇಶನ್ ಆಧಾರದಲ್ಲಿ ವ್ಯಕ್ತಿಯನ್ನು ಪತ್ತೆ ಮಾಡಿದ್ದ ಜಿಲ್ಲಾಡಳಿತ ಅತನನ್ನು ಕ್ವಾರಂಟೈನ್ ಮಾಡಿ ಗಂಟಲ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು.
ಎ.2ರಂದು ಇವರ ಗಂಟಲ ದ್ರವದ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ನೆಗಟಿವ್ ಬಂದಿತ್ತು. ಎರಡನೇ ಬಾರಿಗೆ ಎ.13ರಂದು ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಇದೀಗ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈತನ ಜೊತೆ ತೆರಳಿದ್ದ ತುಂಬೆ ಗ್ರಾಮದ ವ್ಯಕ್ತಿಗೆ ಎ.4ರಂದೇ ಕೊರೋನ ಪಾಸಿಟಿವ್ ಆಗಿತ್ತು. ಜಿಲ್ಲೆಯಲ್ಲಿ ಇದುವರೆಗೆ ಕೊರೋನ ದೃಢಪಟ್ಟು ಚಿಕಿತ್ಸೆಯಲ್ಲಿದ್ದ 13 ಮಂದಿಯ ಪೈಕಿ ಒಂಬತ್ತು ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ .ಕಳೆದ 12 ದಿನದಿಂದ ಒಂದೇ ಒಂದು ಕೇಸ್ ಇಲ್ಲದೆ ನೆಮ್ಮದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ದೃಢಪಟ್ಟ 13ನೇ ಕೊರೋನ ಪ್ರಕರಣದಿಂದ ಜಿಲ್ಲೆಯಲ್ಲಿ ಆತಂಕ ಮೂಡಿದೆ.
Comments are closed.