ಬಿಜಿಂಗ್: ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿ..’ ಎಂಬ ಗಾದೆ ಮಾತಿನಂತೆ ಕೊರೊನಾ ವೈರಸ್ನಿಂದ ಮುಕ್ತಿ ಹೊಂದಿರುವುದಾಗಿ ಹೇಳಿಕೊಳ್ಳುತ್ತಿರುವ ಚೀನಾದಲ್ಲಿ ಎರಡನೇ ಸುತ್ತಿನ ವೈರಸ್ ದಾಳಿ ಆರಂಭವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮುಂಬರುವ ನವೆಂಬರ್ನಲ್ಲಿ ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಎರಡನೇ ಬಾರಿಗೆ ಜಗತ್ತಿಗೆ ಪಸರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಖುದ್ದು ಚೀನಾದ ತಜ್ಞರೇ ಅಂದಾಜಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಂಘೈ ಕೋವಿಡ್-19 ತಂಡದ ಸದಸ್ಯ ಜಾಂಗ್ ವೆನ್ಹಾಂಗ್, ಮುಂದಿನ ದಿನಗಳಲ್ಲಿ ಎದುರಾಗಲಿರುವ ಎರಡನೇ ಸುತ್ತಿನ ಕೊರೊನಾ ವೈರಸ್ ದಾಳಿಯ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದು ಎಚ್ಚರಿಸಿದ್ದಾರೆ.
ನವೆಂಬರ್ ಚಳಿಗಾಳದಲ್ಲಿ ಚೀನಾದಲ್ಲಿ ಎರಡನೇ ಸುತ್ತಿನ ಕೊರೊನಾ ವೈರಸ್ ದಾಳಿ ಮಾಡುವ ಸಾಧ್ಯತೆಗಳಿದ್ದು, ಈಗಾಗಲೇ ವೈರಸ್ ನಿಯಂತ್ರಣದ ಕುರಿತು ಅಪಾರ ಅನುಭವ ಹೊಂದಿರುವ ಚೀನಾ ತಕ್ಷಣದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಜಗತ್ತು ಸುರಕ್ಷಿತವಾಗಿರಲಿದೆ ಎಂದು ವೆನ್ಹಾಂಗ್ ಹೇಳಿದ್ದಾರೆ.
ಕೊರೊನಾ ವೈರಸ್ನಿಂದ ಮುಕ್ತವಾಗಿರುವುದಾಗಿಹೇಳಿಕೊಳ್ಳುತ್ತಿರುವ ಚೀನಾ, ವೈರಸ್ ಸೊಂಕಿತ ರೋಗಿಗಳ ಚಿಕಿತ್ಸೆಗಾಗಿ ಕಟ್ಟಿಸಿದ್ದ ಆಸ್ಪತ್ರೆಗಳೆಲ್ಲವನ್ನೂ ಮುಚ್ಚಿದೆ. ಆದರೆ ನವೆಂಬರ್ನಲ್ಲಿ ಮತ್ತೆ ವೈರಸ್ ದಾಳಿಯಾಗಲಿದೆ ಎಂಬ ತಜ್ಞರ ಎಚ್ಚರಿಕೆ ಚೀನಾವನ್ನು ದಂಗು ಬಡಿಸಿದೆ.
ಸದ್ಯ ಚೀನಾ ನೀಡಿರುವ ಮಾಹಿತಿಯಂತೆ 82,341 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು. ಈ ಪೈಕಿ 3,342 ಜನ ಈ ಮಾರಕ ವೈರಾಣುವಿಗೆ ಬಲಿಯಾಗಿದ್ದಾರೆ.
Comments are closed.