ಮುಂಬೈ

ಲಾಕ್‌ಡೌನ್; ತರಕಾರಿ ಮಾರಾಟ ಮಾಡುವ ಮಹಿಳೆಯನ್ನು ಥಳಿಸಿದ ಪೊಲೀಸರು

Pinterest LinkedIn Tumblr

ಮುಂಬಯಿ: ಕೊರೊನಾ ವೈರಸ್ ಸೋಂಕು ಅತಿ ಹೆಚ್ಚು ಹರಡುತ್ತಿರುವ ಮುಂಬಯಿನಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಒಂದೆಡೆ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಹಾಗೂ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಇನ್ನೊಂದೆಡೆ ಸಾಮಾನ್ಯ ಜನರ ಪಾಡು ಹೇಳತೀರದು. ಲಾಕ್‌ಡೌನ್ ನಿಯಮ ಜಾರಿಯಲ್ಲಿರುವುದರಿಂದ ತರಕಾರಿ ಮುಂತಾದವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಸಾಮಾನ್ಯ ಜನರು ಅತಿ ಹೆಚ್ಚು ತೊಂದರೆಯನ್ನು ಎದುರಿಸುವಂತಾಗಿದೆ.

ಈ ನಡುವೆ ಲಾಕ್‌ಡೌನ್ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡುವ ತವಕದಲ್ಲಿ ಮಾನವೀಯತೆಯನ್ನು ಮರೆತಿರುವ ನಿಯಮಪಾಲಕರು ತರಕಾರಿ ಮಾರಾಟ ಮಾಡುವ ಮಹಿಳೆಯನ್ನು ಥಳಿಸಿರುವ ಘಟನೆ ವರದಿಯಾಗಿದೆ.

ಮಹಿಳೆಯನ್ನು ತಡೆ ಹಿಡಿಯುವ ಪೊಲೀಸರು, ತರಕಾರಿಗಳನ್ನು ಚಿಲ್ಲಾಪಿಲ್ಲಿಗೊಳಿಸುತ್ತಾರೆ. ಇದರಿಂದ ಕುಪಿತಗೊಂಡ ಆಕೆ ಪೊಲೀಸರ ಮೇಲೆಯೇ ಆಕ್ರಮಣ ಮಾಡುತ್ತಾರೆ. ಈ ಸಂದರ್ಭ ಮಹಿಳಾ ಪೇದೆ ಆಕೆಯನ್ನು ಥಳಿಸುತ್ತಾರೆ. ಈಕೆಗೆ ಮಗದೋರ್ವೆ ವೃದ್ಧ ಮಹಿಳೆ ಸಾಥ್ ನೀಡುತ್ತಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ವ್ಯಾಪಿಯನ್ನು ತಡೆಯಲು ಜನರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿನಂತಿಸಲಾಗಿದೆ. ಅದರಲ್ಲೂ ಮುಂಬಯಿ ಮಹಾನಗರಿಯಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಟ್ ಸ್ಪಾಟ್ ಆಗಿ ಗುರುತಿಸಲಾಗಿದೆ.

ಸಾಮಾನ್ಯ ಜನರಿಗೆ ಈ ಬಗ್ಗೆ ಮನವರಿಕೆ ಮಾಡುವುದನ್ನು ಬಿಟ್ಟು ಥಳಿಸುವುದು, ತರಕಾರಿಗಳನ್ನು ಬಿಸಾಡುವ ಮೂಲಕ ದಬ್ಬಾಳಿಕೆ ಮಾಡುವುದು ನಿಜಕ್ಕೂ ಖೇದಕರ ಸಂಗತಿ.

Comments are closed.