ಕೆಮ್ಮಿಗೆ ರಾಮಬಾಣ ಹಿಪ್ಪಲಿ ಅಥವಾ ಲಾಂಗ್ ಪೆಪ್ಪರ್ ಇದು ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದರ ಉಪಯೋಗ ನಾನಾ ಬಗೆ ಯಲ್ಲಿ ಮಾಡುತ್ತಾರೆ. ಈ ಕೆಮ್ಮು ತುಂಬಾ ದಿನಗಳಿಂದ ನನ್ನನ್ನು ಕಾಡುತ್ತಿದೆ. ಕೆಮ್ಮಿ ಕೆಮ್ಮಿ ಸುಸ್ತಾಗಿಹೋಗಿದ್ದೇನೆ. ರಾತ್ರಿಯಂತೂ ನಿದ್ದೆ ಮಾಡಲಿಕ್ಕೇ ಬಿಡುವುದಿಲ್ಲ ಈ ಹಾಳು ಕೆಮ್ಮು’ ಎಂದು ಅಲವತ್ತುಕೊಳ್ಳುವವರನ್ನುನೀವು ಕಂಡಿರಬಹುದು. ಅಂತಹವರಿಗೆ ಔಷಧವಾಗಿ ಹಿಪ್ಪಲಿಯನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದಕ್ಕೆ ಜೊಲ್ಲು ಬರಿಸುವ ಮತ್ತು ಬಾಯನ್ನು ಮರಗಟ್ಟಿಸುವ ಗುಣವಿದೆ.
ಮಕ್ಕಳಿರುವ ಮನೆಗಳಲ್ಲಂತೂ ಹಿಪ್ಪಲಿ ಇದ್ದೇ ಇರುತ್ತದೆ. ತೀರಾ ಚಿಕ್ಕಮಕ್ಕಳ ಕೆಮ್ಮಿಗೂ ಇದರಿಂದ ಚಿಕಿತ್ಸೆ ನೀಡುತ್ತಾರೆ. ಹಿಪ್ಪಲಿಯನ್ನು ಸ್ವಲ್ಪ ಬಿಸಿ ಮಾಡಿ ಜೇನುತುಪ್ಪದೊಂದಿಗೆ, ಮಕ್ಕಳ ವಯೋಮಾನಕ್ಕೆ ತಕ್ಕಂತೆ ಎಷ್ಟು ಅಗತ್ಯವೋ ಅಷ್ಟು ತೇಯ್ದು ನೆಕ್ಕಿಸುತ್ತಾರೆ. ಹೀಗೆ ಒಂದು ಅಥವಾ ಎರಡು ಬಾರಿ ಕೊಡುವುದರಿಂದಲೇ ಕೆಮ್ಮು ಹತೋಟಿಗೆ ಬರುತ್ತದೆ.
ಹಿಪ್ಪಲಿ ಬಣ್ಣದಲ್ಲಿ ಕಪ್ಪಾಗಿ, ರುಚಿಯಲ್ಲಿ ಸ್ವಲ್ಪ ಖಾರವಾಗಿ ಮೆಣಸಿನಕಾಳಿನ ರುಚಿಯಾಗಿರುತ್ತದೆ. ಸುವಾಸನೆಯಲ್ಲಿ ಮೆಣಸಿನ ಕಾಳಿನ ವಾಸನೆಯನ್ನೇ ಹೋಲುತ್ತದೆ. ನೋಡಲು ಸ್ವಲ್ಲ ಉದ್ದವಾಗಿರುತ್ತದೆ. ಇದು ಕೂಡ ಬಳ್ಳಿಯಲ್ಲೇ ಬಿಡುವ ಸಂಬಾರ ಜಿನಸು. ಕಾಯಿಗಳು ಗೊಂಚಲಾಗಿ ಉರುಳೆಯಾಕಾರದಲ್ಲಿರುತ್ತದೆ. ಕಾಯಾಗಿರುವಾಗ ಎಲೆಹಸಿರು ಬಣ್ಣದಿಂದ ಕೂಡಿರುವ ಹಿಪ್ಪಲಿ ಬೆಳೆದು ಒಣಗಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೆಲವು ಜಾತಿಯ ಹಿಪ್ಪಲಿಗಳು ಬೂದು ಬಣ್ಣದಿಂದ ಕೂಡಿದ್ದರೆ ಇನ್ನು ಕೆಲವು ಜಾತಿಯ ಹಿಪ್ಪಲಿಗಳು ಕಡುಗಪ್ಪು ಬಣ್ಣದಿಂದ ಕೂಡಿರುತ್ತದೆ.
ಭಾರತವು ಹೆಚ್ಚು ಪ್ರಮಾಣದ ಹಿಪ್ಪಲಿಯನ್ನು ಮಲೇಶಿಯಾ ಮತ್ತು ಸಿಂಗಪೂರ್ನಿಂದ ಆಮದು ಮಾಡಿಕೊಳ್ಳುತ್ತದೆ. ಭಾರತದ ಹಿಪ್ಪಲಿಯು ಮುಖ್ಯವಾಗಿ ಅಸ್ಸಾಂ, ಬಂಗಾಳ, ನೇಪಾಳ ಮತ್ತು ಉತ್ತರ ಪ್ರದೇಶಗಳಲ್ಲಿ ಬೆಳೆಯುವ ಕಾಡು ಗಿಡಗಳಿಂದ ಬರುತ್ತದೆ. ಇದು ಕೇರಳ ಮತ್ತು ಪಶ್ಚಿಮ ಬಂಗಾಳದ ಕಾಡುಗಳಲ್ಲೂ ಬೆಳೆಯುತ್ತದೆ.
ಹಿಪ್ಪಲಿಯನ್ನು ಸಂಬಾರ ಜಿನಿಸಾಗಿ ಉಪ್ಪಿನಕಾಯಿಗಳಲ್ಲಿ ಹಾಗೂ ಆಹಾರ ಕೆಡದಂತೆ ಸಂಸ್ಕರಿಸಿಡಲು ಬಳಸುತ್ತಾರೆ. ಹಿಪ್ಪಲಿಯ ಹಣ್ಣು ಗಳಲ್ಲದೆ ಬೇರು, ದಂಟಿನ ದಪ್ಪ ಭಾಗಗಳನ್ನು ಕತ್ತರಿಸಿ, ಒಣಗಿಸಿ ಪಿಪ್ಲ್ಮೋಲ್ ಎಂಬ ಹೆಸರಿನಲ್ಲಿ ಆಯುರ್ವೇದ ಮತ್ತು ಯುನಾನಿ ವೈದ್ಯದಲ್ಲಿ ಔಷಧವಾಗಿ ಬಳಸುತ್ತಾರೆ. ಇದನ್ನು ಶ್ವಾಸನಾಳದ ಕಾಯಿಲೆಗಳಾದ ಕೆಮ್ಮು, ಬ್ರಾಂಕೈಟೀಸ್, ಉಬ್ಬಸ ಮುಂತಾದವುಗಳಲ್ಲಿ, ಪ್ರತ್ಯುದ್ರೇಕಕಾರಿ ಮತ್ತು ನೋವುಗಳ ನಿವಾರಕವಾಗಿಯೂ ಬಳಸುತ್ತಾರೆ. ಮಂಪರಿಗೆ ನಶ್ಯದಂತೆಯೂ, ವಾತದ ನಿವಾರಣೆಗೆ ಹೊಟ್ಟೆಗೆ ಔಷಧವಾಗಿಯೂ ಕೊಡುತ್ತಾರೆ.
ನಿದ್ರಾಹೀನತೆ ಮತ್ತು ಮೂರ್ಛೆ ರೋಗಗಳಲ್ಲಿ ಶಾಮಕವಾಗಿಯೂ, ಶಕ್ತಿದಾಯಕ ಮತ್ತು ರಕ್ತವರ್ಧಕ ಔಷಧದಂತೆಯೂ ಕೊಡುತ್ತಾರೆ. ಪಿತ್ತನಾಳ ಮತ್ತು ಪಿತ್ತಕೋಶಗಳ ತೊಂದರೆ ನಿವಾರಣೆಗಾಗಿ, ಗರ್ಭಸ್ರಾವಕ ಕುಷ್ಠರೋಗಗಳ ಚಿಕಿತ್ಸೆಯಲ್ಲಿಯೂ ಉಪಯೋಗಿಸುತ್ತಾರೆ.
ಹಿಪ್ಪಲಿಯ ಬೇರನ್ನು ಅಕ್ಕಿಯಿಂದ ತಯಾರಿಸುವ ಬೀರ್ಗಳಲ್ಲಿ ಬುರುಗು ಬರಿಸಲು ಬಳಸುತ್ತಾರೆ. ಅಂಡಮಾನ್ ದ್ವೀಪಗಳಲ್ಲಿ ಇದರ ಎಲೆಗಳನ್ನು ವೀಳ್ಯದೆಲೆಯಂತೆ ಅಗಿಯುತ್ತಾರೆ.
ಹಿಪ್ಪಲಿಯನ್ನು ಗೋಮೂತ್ರದ ಜೋತೆ ಸೇವಿಸಿದರೆ ಸಂಧಿಗಳ ನೋವು-ಊತ ಕಡಿಮೆಯಾಗುತ್ತದೆ.
ಅರ್ಧ ಚಮಚ ಹಿಪ್ಪಲಿ ಪುಡಿಗೆ ಅರ್ಧ ಚಮಚ ಜೇನುತುಪ್ಪ ಕಲಸಿ ತಿಂಡಿ ಹಾಗೂ ಊಟಕ್ಕೆ 1 ಗಂಟೆ ಮುಂಚೆ ದಿನಕ್ಕೆ 3 ಬಾರಿ ಸೇವಿಸಿದರೆ ಬೊಜ್ಜು ಕರಗುತ್ತದೆ.
ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ, ಸೈಂಧವ ಉಪ್ಪು ಎಲ್ಲವನ್ನು ಮಜ್ಜಿಗೆ ಜೊತೆ ಬೆಳಗ್ಗೆ ಹಾಗೂ ಸಂಜೆ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ.
ಹಿಪ್ಪಲಿ ಮತ್ತು ಬಜೆಯ ಪುಡಿಯನ್ನು ಬಿಸಿ ಹಾಲು ಅಥವಾ ಬಿಸಿ ನೀರಿನಲ್ಲಿ ದಿನಕ್ಕೆ 2 ಬಾರಿ ಸೇವಿಸಿದರೆ ಅರೆತೆನೋವು ಗುಣವಾಗುತ್ತದೆ.
ಹಲ್ಲುಗಳು ಜುಮ್ ಎನ್ನುತ್ತಿದ್ದರೆ ಹಿಪ್ಪಲಿಯ ಜೊತೆ ತುಪ್ಪ ಮತ್ತು ಜೇನುತುಪ್ಪ ಸೇರಿಸಿ ಹಲ್ಲಿನ ಮೇಲೆ ಲೇಪಿಸಿ ಮೆಲ್ಲಗೆ ತಿಕ್ಕಬೇಕು.
ಹಿಪ್ಪಲಿ ಪುಡಿ ಮತ್ತು ಜೇನುತುಪ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.
ಹಿಪ್ಪಲಿ ಪುಡಿಯನ್ನು ಹಾಲು ಮತ್ತು ಆಡುಸೋಗೆ ರಸದಲ್ಲಿ ಬೆರೆಸಿ ಕುಡಿದರೆ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.
Comments are closed.