ಕರ್ನಾಟಕ

ಕೋವಿಡ್-19: ರಾಜ್ಯದಲ್ಲಿ 24 ಗಂಟೆಯಲ್ಲಿ 29 ಪ್ರಕರಣ

Pinterest LinkedIn Tumblr


ಬೆಂಗಳೂರು(ಏ. 24): ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 29 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 474ಕ್ಕೆ ಏರಿದೆ. ಇದೇ ಅವಧಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅಲ್ಲಿಗೆ ಸಾವಿನ ಸಂಖ್ಯೆ 18ಕ್ಕೆ ಏರಿದೆ. ಆರೋಗ್ಯ ಇಲಾಖೆ ಇವತ್ತು ಸಂಜೆ ಬಿಡುಗಡೆ ಮಾಡಿದ ಬುಲೆಟಿನ್​ನಲ್ಲಿ ಈ ಮಾಹಿತಿ ನೀಡಿದೆ.

ನಿನ್ನೆ ಸಂಜೆ 5ಗಂಟೆಯಿಂದ ಇಲ್ಲಿಯವರೆಗೆ ಸೋಂಕು ಪತ್ತೆಯಾಗಿರುವ 29 ಪ್ರಕರಣಗಳಲ್ಲಿ ಬೆಂಗಳೂರಿನದ್ದೇ 19 ಇದೆ. ಬಾಗಲಕೋಟೆ 3, ಬೆಳಗಾವಿ 2, ವಿಜಯಪುರ 2 ಹಾಗೂ ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣ ಬೆಳಕಿಗೆ ಬಂದಿವೆ.

ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಹೊಸ ಪ್ರಕರಣಗಳು ಹೆಚ್ಚಾಗಿ ಹೊಂಗಸಂದ್ರ ಮತ್ತು ಪಾದರಾಯನಪುರ ಕೇಸ್​ಗಳೇ ಆಗಿವೆ. ಕುತೂಹಲದ ವಿಚಾರವೆಂದರೆ ಈ 29 ಪ್ರಕರಣಗಳಲ್ಲಿ ಇಬ್ಬರು ಮಾತ್ರ 50 ವರ್ಷ ವಯಸ್ಸು ದಾಟಿದರಾಗಿದ್ಧಾರೆ.

ಬಂಟ್ವಾಳದಲ್ಲಿ SARI ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 74 ವರ್ಷದ ಮಹಿಳೆ ಮೃತಪಟ್ಟಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 18ಕ್ಕೆ ಏರಿದೆ.

ಬೆಂಗಳೂರಿನಲ್ಲಿ ಪ್ರಕರಣ ಸಂಖ್ಯೆ 120ಕ್ಕೆ ಏರಿದೆ. ಮೈಸೂರು ಅತಿ ಸಮೀಪದಲ್ಲಿದೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರ್ಗಿ ಮತ್ತು ಬಾಗಲಕೋಟೆಯಲ್ಲೂ ಅಧಿಕ ಕೊರೋನಾ ಕೇಸ್​ಗಳಿವೆ.

ಇದೇ ವೇಳೆ, ಬೆಂಗಳೂರಿನಲ್ಲಿ ಪಾದರಾಯನಪುರ ಮತ್ತು ಹೊಂಗಸಂದ್ರ ಎರಡು ಹಾಟ್​ಸ್ಪಾಟ್ ಆಗಿವೆ. ಪಾದರಾಯನಪುರದ 248 ಮಂದಿಯನ್ನ ಕ್ವಾರಂಟೈನ್​ನಲ್ಲಿಡಲಾಗಿದೆ. ಹೊಂಗಸಂದ್ರದ 245 ಮಂದಿ ಕ್ವಾರಂಟೈನ್​ನಲ್ಲಿದ್ದಾರೆ.ರಾಜ್ಯದಲ್ಲಿ ಒಟ್ಟು 111 ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಇದರಲ್ಲಿ 377 ಶಂಕಿತರು ಇದ್ದಾರೆ. ಬಫರ್ ಝೋನ್​ನಲ್ಲಿ ಇರುವ ಮನೆಗಳ ಸಂಖ್ಯೆ 6,77,573 ಇದೆ. ಇಲ್ಲಿ ಸುಮಾರು 31 ಲಕ್ಷ ಜನರು ವಾಸಿಸುತ್ತಿದ್ಧಾರೆನ್ನಲಾಗಿದೆ.

ಇನ್ನು, ಕೋವಿಡ್ ಕೈಂಕರ್ಯದಲ್ಲಿರುವ ಎಲ್ಲಾ ಪೊಲೀಸರಿಗೂ ಕೊರೋನಾ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ಪೊಲೀಸರಿಗೆ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲು ಸರ್ಕಾರ ಆದೇಶಿಸಿದೆ.

ಈವರೆಗೆ ಪತ್ತೆಯಾಗಿರುವ ಕೊರೋನಾ ಪ್ರಕರಣಗಳು:

ಬೆಂಗಳೂರು ನಗರ: 120
ಮೈಸೂರು: 88
ಬೆಳಗಾವಿ: 45
ವಿಜಯಪುರ: 39
ಕಲಬುರ್ಗಿ: 36
ಬಾಗಲಕೋಟೆ: 24
ಚಿಕ್ಕಬಳ್ಳಾಪುರ: 17
ದಕ್ಷಿಣ ಕನ್ನಡ: 16
ಬೀದರ್: 15
ಮಂಡ್ಯ: 15
ಬಳ್ಳಾರಿ: 13
ಬೆಂಗಳೂರು ಗ್ರಾಮಾಂತರ: 12
ಉತ್ತರ ಕನ್ನಡ: 11
ಧಾರವಾಡ: 9
ಗದಗ: 4
ಉಡುಪಿ: 3
ದಾವಣಗೆರೆ: 2
ತುಮಕೂರು: 3
ಚಿತ್ರದುರ್ಗ: 1
ಕೊಡಗು: 1

Comments are closed.