ಅಂತರಾಷ್ಟ್ರೀಯ

ಕೊರೊನಾಗೆ ಹೆದರಿ ಅಡಗಿ ಕುಳಿತ ಕಿಮ್ ಜಾಂಗ್ ಉನ್?

Pinterest LinkedIn Tumblr


ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಮತ್ತು ಆತನ ಸಾವಿನ ಕುರಿತ ಸರಣಿ ವರದಿಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ದಕ್ಷಿಣ ಕೊರಿಯಾ, ಕಿಮ್ ಜಾಂಗ್ ಉನ್ ಆರೋಗ್ಯವಾಗಿ ಮತ್ತು ಸದೃಢವಾಗಿದ್ದಾನೆ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.

ಅದಾಗ್ಯೂ ಕಿಮ್ ಜಾಂಗ್ ಉನ್ ಏಕೆ ಬಹಿರಂಗವಾಗಿ ಕಾಣಿಸುತ್ತಿಲ್ಲ ಎಂಬುದರ ಕುರಿತು ತಲೆಕೆಡಿಸಿಕೊಂಡಿರುವ ದಕ್ಷಿಣ ಕೊರಿಯಾ, ಆತ ಹೀಗೆ ಏಕಾಏಕಿ ಅದೃಶ್ಯವಾಗಲು ಏನು ಕಾರಣವಿರಬಹುದು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ.

ಅದರಂತೆ ಕಿಮ್ ಜಾಂಗ್ ಉನ್ ಬಹುಶಃ ಮಾರಕ ಕೊರೊನಾ ವೈರಸ್‌ ಸೋಂಕು ತಗುಲುವ ಭಯದಿಂದ ಹೀಗೆ ಸಾರ್ವಜನಿಕ ಬದುಕಿನಿಂದ ದೂರವಾಗಿರಬಹುದು ಎಂದು ದಕ್ಷಿಣ ಕೊರಿಯಾ ಅಂದಾಜಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕೊರಿಯಾ ಸಚಿವ ಕಿಮ್ ಯೆಯಾನ್-ಚುಲ್, ಕೊರೊನಾ ವೈರಸ್ ಸೋಂಕು ತಗುಲುವ ಭಯದಿಂದ ಕಿಮ್ ಜಾಂಗ್ ಉನ್ ಯಾವುದೇ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳು ಹೇಳುವಂತೆ ಕಿಮ್ ಜಾಂಗ್ ಉನ್ ಯಾವುದೇ ಆರೋಗ್ಯದ ಸಮಸ್ಯೆಯಿಲ್ಲ. ಅಲ್ಲದೇ ಆತನ ಸಾವಿನ ಸುದ್ದಿ ಕೇವಲ ವದಂತಿ ಎಂದಿರುವ ಕಿಮ್ ಯೆಯಾನ್-ಚುಲ್, ಕೊರೊನಾ ವೈರಸ್ ಭಯಕ್ಕೆ ಕಿಮ್ ಜಾಂಗ್ ಉನ್ ತಾತ್ಕಾಲಿಕವಾಗಿ ಅದೃಶ್ಯವಾಗಿದ್ದಾನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಕಿಮ್ ಜಾಂಗ್ ಉನ್ ಏಕಾಏಕಿ ಅದೃಶ್ಯದ ಕುರಿತು ತರಹೇವಾರಿ ವರದಿಗಳು ಹೊರಬರುತ್ತಿದ್ದು, ಇದೆಲ್ಲದಕ್ಕೂ ಆತನ ಬಹಿರಂಗವಾಗಿ ಮತ್ತೆ ಕಾಣಿಸಿಕೊಳ್ಳುವುದೊಂದೇ ಪರಿಹಾರವಾಗಿದೆ.

Comments are closed.