ಅಂತರಾಷ್ಟ್ರೀಯ

ಕೊರೊನಾ ವೈರಸ್ ಹರಡುವಿಕೆಗೆ ಕಾರಣವಾಗಿರುವ ಚೀನಾದ 184 ದೇಶಗಳ ಆರ್ಥಿಕ ನಷ್ಟ ಭರಿಸಬೇಕು: ಟ್ರಂಪ್

Pinterest LinkedIn Tumblr


ವಾಷಿಂಗ್ಟನ್: ಕೊರೊನಾ ವೈರಸ್ ಹರಡುವಿಕೆಗೆ ಕಾರಣವಾಗಿರುವ ಚೀನಾದ ಮೇಲಿನ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾರಕ ವೈರಾಣು ಜಗತ್ತಿನ 184 ದೇಶಗಳಿಗೆ ನರಕ ತೋರಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.

ವಿಶ್ವದ 184 ದೇಶಗಳು ಕೊರೊನಾ ವೈರಸ್‌ನಿಂದಾಗಿ ನರತ ಯಾತನೆಯನ್ನು ಅನುಭವಿಸುತ್ತಿದ್ದು, ಇದಕ್ಕೆ ಕಾರಣವಾದ ಚೀನಾ ಮೇಲೆ ಯಾವುದೇ ಕ್ರಮವಿಲ್ಲವೇ ಎಂದು ಡೊನಾಲ್ಡ್ ಟ್ರಂಪ್ ಮತ್ತೆ ಪ್ರಶ್ನಿಸಿದ್ದಾರೆ.

ಜಗತ್ತಿಗೆ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದ್ದ ಒಂದೇ ಒಂದು ರಾಷ್ಟ್ರವೆಂದರೆ ಅದು ಚೀನಾ. ಆದರೆ ವೈರಸ್ ಹರಡಲಿದೆ ಎಂಬುದು ಗೊತ್ತಿದ್ದೂ ಸುಮ್ಮನಿದ್ದ ಚೀನಾ ಮೇಲೆ ಕ್ರಮ ಕೈಗೊಳ್ಳುವುದು ಸರಿಯಾದ ಕ್ರಮ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ವೈರಸ್ ಹರಡುವಿಕೆಯ ಕುರಿತು ಜಗತ್ತಿಗೆ ಚೀನಾ ಆರಂಭದಲ್ಲೇ ಮಾಹಿತಿ ನೀಡಿದ್ದರೆ ಇಷ್ಟೊಂದು ಸಾವು-ನೋವುಗಳನ್ನು ನೋಡಬೇಕಿರಲಿಲ್ಲ. ಅಲ್ಲದೇ ಈ ಪ್ರಮಾಣದಲ್ಲಿ ಆರ್ಥಿಕ ಹಿಂಜರಿಕೆಯನ್ನೂ ಅನುಭವಿಸಬೇಕಿರಲಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.

ವಿಶ್ವದ ಆರ್ಥಿಕ ವ್ಯವಸ್ಥೆಗೆ ಭಾರೀ ಪೆಟ್ಟು ಬೀಳಲು ಕಾರಣವಾಗಿರುವ ಚೀನಾ ಈ ನಷ್ಟವನ್ನು ಭರಿಸಲೇಬೇಕು ಎಂದು ಟ್ರಂಪ್ ಮತ್ತೊಮ್ಮೆ ಆಗ್ರಹಿಸಿದ್ದಾರೆ. 184 ರಾಷ್ಟ್ರಗಳನ್ನು ಸಂಕಷ್ಟಕ್ಕೆ ದೂಡಿರುವ ಚೀನಾ ಈ ಎಲ್ಲ ರಾಷ್ಟ್ರಗಳ ಜವಾಬ್ದಾರಿ ಹೊರಬೇಕು ಎಂಧು ಟ್ರಂಪ್ ಒತ್ತಾಯಿಸಿದ್ದಾರೆ.

ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿರುವ ಇಂಗ್ಲೆಂಡ್ ಮತ್ತು ಜರ್ಮನಿ ರಾಷ್ಟ್ರಗಳೂ, ಚೀನಾ ಮೊದಲೇ ವಿಶ್ವಕ್ಕೆ ಎಚ್ಚರಿಕೆ ನೀಡಿದ್ದರೆ ನಾವೆಲ್ಲಾ ಇಷ್ಟೊಂದು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತಿರಲಿಲ್ಲ ಎಂದು ಕಿಡಿಕಾರಿವೆ.

ಒಟ್ಟಿನಲ್ಲಿ ಕೊರೊನಾ ವೈರಸ್ ಹಾವಳಿಯ ಕಾರಣಕ್ಕೆ ಚೀನಾದ ಮೇಲೆ ಜಾಗತಿಕ ಒತ್ತಡ ಹೆಚ್ಚಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.