ಬೆಂಗಳೂರು: ಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಹಲವು ದಿನಗಳಿಂದ ಘೋಷಣೆ ಮಾಡಿಲಾಗಿದ್ದ ಲಾಕ್’ಡೌನ್ ನಿನ್ನೆಯಷ್ಟೇ ಸಡಿಲಗೊಂಡಿದ್ದು, ಕೊರೋನಾ ಭಯವಿಲ್ಲದೆ ಇದೀಗ ಜನರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳು ಸಾಕಷ್ಟು ಕಠಿಣವಾಗಿರಲಿದ್ದು, ಬಹಳ ಎಚ್ಚರದಿಂದಿರಬೇಕೆಂದು ಅರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಅವರು, ಮುಂದಿನ ದಿನಗಳು ನಮಗೆಲ್ಲರಿಗೂ ಪರೀಕ್ಷೆಯ ದಿನಗಳಾಗಿರಲಿದ್ದು, ಈ ದಿನಗಳಲ್ಲಿ ದಾಖಲಾಗುವ ಸೋಂಕಿತರ ಸಂಖ್ಯೆ ಕೊರೋನಾ ವಿರುದ್ಧ ನಮ್ಮ ಹೋರಾಟದ ಫಲಿತಾಂಶವನ್ನು ನಿರ್ಧರಿಸಲಿದೆ. ಈಗಾಗಲೇ ಇಲಾಖೆ ಸಾಧ್ಯವಾದಷ್ಟು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಸಮುದಾಯ ಹರಡುವಿಕೆಯನ್ನು ತಡೆಯಲು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಸಾರ್ವಜನಿಕರು ಸ್ವಚ್ಛತೆ ಹಾಗೂ ಸ್ವಶಿಸ್ತು ಕಾಪಾಡುವುದನ್ನು ಪಾಲನೆ ಮಾಡದೇ ಹೋದರೆ, ಪರಿಸ್ಥಿತಿ ಕಷ್ಟಕರವಾಗಿರಲಿದೆ. ಪ್ರಸ್ತುತ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಮುಂದೆ ನಾವು ಹೇಗಿರುತ್ತೇವೆ. ಹೇಗೆ ಮುನ್ನಡೆಯುತ್ತೇವೆಂಬುದು ಮುಂದಿನ ಫಲಿತಾಂಶಗಳು ನಿರ್ಧರಿಸಲಿವೆ ಎಂದು ತಿಳಿಸಿದ್ದಾರೆ.
ಜನರು ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ, ಮಾಸ್ಕ್’ಗಳು ಧರಿಸುವುದರಿಂದ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಾಗೂ ಸ್ಯಾನಿಟೈಸರ್ ಗಳನ್ನು ಬಳಕೆ ಮಾಡುವುದರಿಂದ ಕೊರೋನಾವನ್ನು ದೂರ ಇಡಬಹುದು ಎಂದು ಹಿರಿಯ ವೈದ್ಯರು ಹೇಳಿದ್ದಾರೆ.
Comments are closed.