ನವ ದೆಹಲಿ (ಮೇ 06); ಕೊರೋನಾದಿಂದಾಗಿ ಇಡೀ ವಿಶ್ವವೇ ಲಾಕ್ಡೌನ್ ಆಗಿದೆ. ಪರಿಣಾಮ ಆರ್ಥಿಕ-ವಾಣಿಜ್ಯ ವಹಿವಾಟುಗಳು ಸ್ಥಗಿತವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪಾತಾಳಕ್ಕೆ ಕುಸಿದಿದೆ. ಭಾರತದಲ್ಲೂ ಹಣಕಾಸಿನ ವ್ಯವಸ್ಥೆ ಪ್ರತಿನಿತ್ಯ ಬಿಗಡಾಯಿಸುತ್ತಲೇ ಇದೆ. ಇದೇ ಕಾರಣಕ್ಕೆ ಕೊರೋನಾ ವಿರುದ್ಧದ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಏರಿಸಿದೆ.
ಲಾಕ್ಡೌನ್ ನಡುವೆ ಇಂದು ಮತ್ತೆ ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹಿಂದೆಂದೂ ಕಾಣದ ಮಟ್ಟಿಗೆ ಏರಿಸಿದೆ. ಅಂದರೆ ಪೆಟ್ರೋಲ್ಗೆ ಲೀಟರ್ ಒಂದಕ್ಕೆ 10 ರೂ ಹಾಗೂ ಡೀಸೆಲ್ಗೆ ಲೀಟರ್ ಒಂದಲ್ಕೆ 13 ರೂ ನಷ್ಟು ಅಬಕಾರಿ ಸುಂಕವನ್ನು ಏರಿಸಿದೆ. ಆದರೆ, ಇದು ಜನರ ಚಿಲ್ಲರೆ ವಹಿವಾಟಿಗೆ ಅನ್ವಯವಾಗುವುದಿಲ್ಲ. ಬದಲಾಗಿ ಈ ಬೆಲೆ ಏರಿಕೆ ಕೇವಲ ತೈಲ ಕಂಪೆನಿಗಳಿಗೆ ಮಾತ್ರ ಅನ್ವಯವಾಗಲಿದ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇತಿಹಾಸ ಕಾಣದಷ್ಟು ಪಾತಾಳಕ್ಕೆ ಕುಸಿದಿದ್ದರೂ ಸಹ ಕೇಂದ್ರ ಸರ್ಕಾರ ಮಾತ್ರ ತೈಲ ಕಂಪೆನಿಗಳು ನಷ್ಟದಲ್ಲಿವೆ ಎಂಬ ಕಾರಣವನ್ನೊಡ್ಡಿ ದಿನೇ ದಿನೇ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಇತ್ತು.ಸರ್ಕಾರದ ಈ ನೀತಿ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ತೈಲ ಕಂಪೆನಿಗಳಿಗೆ ತೆರಿಗೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವುದು ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.
Comments are closed.