ನವದೆಹಲಿ: ಲಾಕ್‌ಡೌನ್ (Lockdown) ವೇಳೆ ಬೇರೆ ಬೇರೆ ದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ದೇಶಗಳಲ್ಲಿ ಸಿಲುಕಿದ್ದ ಕನ್ನಡಿಗರು ತಾಯ್ನಾಡಿಗೆ ಮರಳಲು ವಿದೇಶಾಂಗ ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.
ಯಾವ್ಯಾವ ದೇಶಗಳಿಂದ ಎಷ್ಟು ಮಂದಿ ಕನ್ನಡಿಗರು ವಾಪಸ್ ಬರುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ:
ಈವರೆಗೆ ನೊಂದಾಯಿಸಿಕೊಂಡಿರುವ ಮಾಹಿತಿಗಳ ಪ್ರಕಾರ ಮೊದಲ ಹಂತದಲ್ಲಿ ಬೇರೆ ಬೇರೆ ದೇಶಗಳಿಂದ ಒಟ್ಟು 10,823 ಜನರನ್ನು ವಾಪಾಸ್ ಕರೆತರಲು ನಿರ್ಧರಿಸಲಾಗಿದೆ. ಈ ಪೈಕಿ 4,408 ಮಂದಿ ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,784 ಜನ ವೃತ್ತಿ ನಿರತರು ಹಾಗೂ 557 ಹಡಗು ಸಿಬ್ಬಂದಿ ಕರ್ನಾಟಕಕ್ಕೆ ವಾಪಾಸಾಗಲಿದ್ದಾರೆ.
ವಿದೇಶಗಳಿಂದ ಬರುತ್ತಿರುವವರ ಪೈಕಿ ಯುಎಇ (UAE)ಯಿಂದ ಅತಿ ಹೆಚ್ಚು ಅಂದರೆ 2,575 ಜನ ಬರುತ್ತಿದ್ದಾರೆ. ಬಳಿಕ ಸೌದಿ ಅರೇಬಿಯದಿಂದ 927 ಜನರನ್ನು ಬೆಂಗಳೂರಿಗೆ ವಾಪಾಸ್ ಕರೆತರಲಾಗುತ್ತಿದೆ. ಅಮೆರಿಕ (America) ದಿಂದ 927 ಮಂದಿ ಬರುತ್ತಿದ್ದಾರೆ. ಕತಾರ್ ನಿಂದ 414 ಜನ ಬರುತ್ತಿದ್ದಾರೆ. ಕೆನಡದಿಂದ 328 ಮಂದಿ ಆಗಮಿಸುತ್ತಿದ್ದಾರೆ.
ಲಾಕ್‌ಡೌನ್ (Lockdown) ನಿಯಮಾವಳಿಗಳ ಪ್ರಕಾರ ಹೊರಡುವ ಮುನ್ನ ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ದೇಶಕ್ಕೆ ಮರಳಿದ ಬಳಿಕ ಮತ್ತೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಮತ್ತಿತರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಪ್ರತಿಯೊಬ್ಬ ಪ್ರಯಾಣಿಕರೂ ಆರೋಗ್ಯ ಸೇತು (Aarogya setu) ಆ್ಯಪ್ ಹೊಂದಿರಬೇಕು ಹಾಗೂ ಆ್ಯಪ್ ನಲ್ಲಿ ತಮ್ಮ ಆರೋಗ್ಯದ ಮಾಹಿತಿಯನ್ನು ಅಪ್ ಲೋಡ್ ಮಾಡಿರುವಂತೆ ಸೂಚಿಸಲಾಗಿದೆ.
ಕೊರೋನಾ ವೈರಸ್ ಕೋವಿಡ್-19 (Covid-19) ಇದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಮಾತ್ರವಲ್ಲ, ಅಸ್ತಮಾ, ಉಸಿರಾಟದ ತೊಂದರೆ, ಶೀತ, ಕೆಮ್ಮು, ಮುಧುಮೇಹ, ರಕ್ತದ ಒತ್ತಡ ಮತ್ತಿತರ ಖಾಯಿಲೆಗಳಿದ್ದರೂ ಆರೋಗ್ಯ ತಪಾಸಣೆ ನಡೆಸಿ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕು. ಪ್ರಯಾಣದ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿರ್ದೇಶನವನ್ನೂ ನೀಡಲಾಗಿದೆ.
ಹೊರ ದೇಶಗಳಿಂದ ಬರುವವರು ಅವರ ಪ್ರಯಾಣ ಭತ್ಯೆಯನ್ನು ಅವರೇ ಭರಿಸಬೇಕು. ಆರೋಗ್ಯ ಇಲಾಖೆ ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಮುಖ್ಯವಾಗಿ 14 ದಿನ ಕ್ವಾರಂಟೈನ್ (Quarantine) ನಲ್ಲಿ ಇರಬೇಕು. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿರುವ ಬಸ್ ಗಳ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಹೋಗಬೇಕು. 14 ದಿನಗಳ ಕ್ವಾರಂಟೈನ್ ಬಳಿಕ ನೆಗೆಟಿವ್ ಬಂದರೆ ಮನೆಗೆ ಹೋಗಬಹುದು. ಆಮೇಲೇ ಕೂಡ 14 ದಿನ ಐಸೋಲೇಷನ್ ನಲ್ಲಿ ಇರಬೇಕು.
ಇದಾದ ಬಳಿಕ ಎರಡನೇ ಹಂತದಲ್ಲಿ 6,100 ಜನರನ್ನು ಕರೆತರಲು ನಿರ್ಧರಿಸಲಾಗಿದೆ. ಈ ಪೈಕಿ 2,380 ಮಂದಿ ಪ್ರವಾಸಿಗರು, 1,600 ಜನ ವಲಸೆ ಕಾರ್ಮಿಕರು, 1,503 ಮಂದಿ ವೃತ್ತಿ ನಿರತರು ಹಾಗೂ 557 ಹಡಗು ಸಿಬ್ಬಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ.
Comments are closed.