ಹೊಸ ದಿಲ್ಲಿ: ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಂದ ಮಹಿಳೆ, ಆತ ಕೊರೊನಾ ವೈರಸ್ ಸೋಂಕಿನಿಂದ ಸತ್ತಿದ್ದಾನೆ ಎಂದು ನಂಬಿಸಲು ಹೋಗಿ ಸಿಕ್ಕಿಬಿದ್ದ ಘಟನೆ ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ನಡೆದಿದೆ. ದಿಲ್ಲಿಯ ಅಶೋಕ್ ವಿಹಾರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಧ್ಯ ಪ್ರವೇಶ ಮಾಡಿದ ಪೊಲೀಸರು ಮೃತನ ಅಂತ್ಯಸಂಸ್ಕಾರ ತಡೆದು ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.
46 ವರ್ಷ ವಯಸ್ಸಿನ ಶರತ್ ದಾಸ್ ದಿಲ್ಲಿಯ ಅಶೋಕ್ ವಿಹಾರ ಪ್ರದೇಶದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು. ಇವರ ಪತ್ನಿ ಅನಿತಾ ಬೆಳ್ಳಂಬೆಳಗ್ಗೆ ನೆರೆ ಮನೆಯ ಬಾಗಿಲು ಬಡಿದು ತನ್ನ ಗಂಡ ರಾತ್ರಿ ಮಲಗಿದವನು ಬೆಳಗ್ಗೆ ಏಳುತ್ತಲೇ ಇಲ್ಲ, ಆತನ ದೇಹದಲ್ಲಿ ಚಲನೆಯೇ ಇಲ್ಲ ಎಂದು ಸಹಾಯಕ್ಕಾಗಿ ಬೇಡಿಕೊಂಡರು. ತನ್ನ ಗಂಡ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿರಬಹುದು, ಆತನ ಅಂತ್ಯಕ್ರಿಯೆಗೆ ಸಹಕರಿಸಿ ಎಂದು ಬೇಡಿಕೊಂಡಳು. ಕೂಡಲೇ ಸ್ಥಳೀಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತ ಶರತ್ ದಾಸ್ ಪತ್ನಿ ಅನಿತಾ ಅವರ ಬಳಿ, ಶರತ್‌ನ ವೈದ್ಯಕೀಯ ದಾಖಲೆಗಳನ್ನು ತೋರಿಸುವಂತೆ ಕೇಳಿದರು. ಆದ್ರೆ, ಆಕೆಯ ಬಳಿ ಯಾವುದೇ ವೈದ್ಯಕೀಯ ದಾಖಲೆ ಇರಲಿಲ್ಲ. ನೆರೆ ಮನೆಯವರ ಪ್ರಕಾರ, ಶರತ್‌ಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ. ಹೀಗಾಗಿ ಪೊಲೀಸರು ಮೃತನ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದರು. ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿ ಸತ್ತಿದ್ದಾನೆ ಎಂದು ತಿಳಿದುಬಂತು. ಹೀಗಾಗಿ, ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದರು.
ಮೃತ ಶರತ್‌ನ ಪತ್ನಿ ಅನಿತಾಳಿಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಆಕೆ ಸತ್ಯಾಂಶ ಬಾಯಿಬಿಟ್ಟಳು. ನನ್ನ ಗಂಡ ನನ್ನನ್ನು ಚನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ನನ್ನ ಅಕ್ರಮ ಸಂಬಂಧದ ಬಗ್ಗೆಯೂ ಆತನಿಗೆ ಗೊತ್ತಾಗಿತ್ತು. ಹೀಗಾಗಿ ನೆಯಲ್ಲೂ ಯಾವಾಗಲೂ ಗಲಾಟೆ ನಡೆಯುತ್ತಿತ್ತು. ಹೀಗಾಗಿ, ನನ್ನ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿದ್ದಾಗಿ ಹೇಳಿದಳು.
ಮೇ 1ರ ರಾತ್ರಿ ನನ್ನ ಪತಿ ಮಲಗಿದ್ದಾಗ ಪ್ರಿಯಕರನ್ನು ಕರೆಸಿಕೊಂಡೆ. ನನ್ನ ಪ್ರಿಯಕರ ಸಂಜಯ್ ಜೊತೆಗೂಡಿ ಹೊದಿಕೆಯಿಂದ ಶರತ್‌ನ ಮುಖವನ್ನು ಒತ್ತಿಹಿಡಿದು ಕೊಂದು ಹಾಕಿದೆವು ಎಂದು ಆಕೆ ವಿವರಿಸಿದಳು. ಆ ಬಳಿಕ, ಜೈಲು ಸೇರುವ ಭಯದಿಂದ ಕೊರೊನಾ ವೈರಸ್‌ನಿಂದ ಸತ್ತಿದ್ದಾನೆ ಎಂದು ಕಥೆ ಕಟ್ಟಿದೆ ಎಂದು ಆಕೆ ಹೇಳಿದ್ದಾಳೆ.
Comments are closed.