ಕರ್ನಾಟಕ

ಪ್ರೀತಿ, ಪ್ರೇಮದ ಹೆಸರಲ್ಲಿ ಇಬ್ಬರು ಯುವಕರ ಜೀವಬಲಿ: ಲಾಕ್‌ಡೌನ್‌ ನಡುವಲ್ಲೇ ಪೊಲೀಸರಿಗೆ ತಲೆನೋವಾದ ಪ್ರಕರಣ..!

Pinterest LinkedIn Tumblr


ಮೈಸೂರು: ಕ್ಯಾತಮಾರನಹಳ್ಳಿಯಲ್ಲಿ ಮೇ 4ರಂದು ಸ್ನೇಹಿತರಿಂದಲೇ ಹತ್ಯೆಗೀಡಾದ ಸತೀಶ್‌ ಕೊಲೆ ಪ್ರಕರಣಕ್ಕೆ ಮತ್ತೊಂದು ಜೀವ ಬಲಿಯಾಗಿದೆ.

ಅಭಿ ಎಂಬಾತ ಕೊಲೆಯಾದ ಮತ್ತೊಬ್ಬ ಯುವಕ. ಈತ ಕೊಲೆ ಆರೋಪಿ ಕಿರಣ್‌ನ ತಮ್ಮ. ಪ್ರೀತಿಯ ವಿಷಯಕ್ಕಾಗಿ ಸತೀಶ್‌, ಕಿರಣ್‌, ಮಧು ನಡುವೆ ಕುಡಿತದ ವೇಳೆ ಜಗಳ ಶುರುವಾಗಿತ್ತು. ಅಂದು ಕ್ಯಾತಮಾರನಹಳ್ಳಿಯ ಸತೀಶ್‌ನನ್ನು ಕಿರಣ್‌ ಮತ್ತು ಮಧು ಇವರಿಬ್ಬರು ಕೊಲೆಗೈದಿದ್ದರು ಎಂದು ಆರೋಪಿಸಲಾಗಿದೆ. ಇದಾದ ಮಾರನೇ ದಿನ ಸತೀಶ್‌‌ ಕೊಲೆ ಆರೋಪಿಗಳಾದ ಕಿರಣ್‌, ಮಧುನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದರು.

ಇದಾದ ಮರುದಿನವೇ ಸತೀಶ್‌ನ ಸ್ನೇಹಿತರಾದ ಇರ್ಫಾನ್, ಮಹೇಂದ್ರ ಎಂಬಿಬ್ಬರು ಯುವಕರು ಕೊಲೆ ಆರೋಪಿ ಕಿರಣ್‌ನ‌ ತಮ್ಮ ಅಭಿಗೆ ಮೊಬೈಲ್ ಕರೆ ಮಾಡಿ, ಮಾತನಾಡಬೇಕು ಬಾ ಎಂದು ಕರೆದಿದ್ದಾರೆ. ಇದನ್ನು ನಂಬಿದ ಅಭಿ, ಅವರು ಹೇಳಿದಂತೆ ಗಾಯತ್ರಿ ಪುರಂ ಬಡಾವಣೆಗೆ ಬಂದಿದ್ದಾನೆ. ತಕ್ಷಣವೇ ಇರ್ಫಾನ್, ಮಹೇಂದ್ರ ಚಾಕುವಿನಿಂದ ಇರಿದು ಅಭಿಯನ್ನು ಕೊಲೆ ಮಾಡಿದ್ದಾರೆ.

ಕೊಲೆ ಮಾಡಿದ ಬಳಿಕ ಖುದ್ದು ಮಹೇಂದ್ರ, ಇರ್ಫಾನ್‌ ಇಬ್ಬರೂ‌ ಉದಯಗಿರಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬಂದ ಕಾನ್‌ಸ್ಟೆಬಲ್‌ಗೆ ಶವ ತೋರಿಸಿ, ನಜರಾಬಾದ್ ಪೊಲೀಸ್ ಠಾಣೆಗೆ ಖುದ್ದು ಆರೋಪಿಗಳೇ ಶರಣಾಗಿದ್ದಾರೆ. ಈ ಮೂಲಕ ಪ್ರೀತಿ, ಪ್ರೇಮ, ಪ್ರತೀಕಾರದ ಹೆಸರಲ್ಲಿ ಎರಡು ಅಮಾಯಕ ಜೀವಗಳು ಬಲಿಯಾಗಿವೆ.

Comments are closed.