ಬೀಜಿಂಗ್: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಆರೈಕೆ ಮಾಡಿ ಬೇಸತ್ತ ಪಾಪಿ ಮಗನೋರ್ವ ಆಕೆಯನ್ನು ಜೀವಂತ ಸಮಾಧಿ ಮಾಡಿದ್ದು, ಮೂರು ದಿನಗಳ ಬಳಿಕ ತಾಯಿ ಪ್ರತ್ಯಕ್ಷವಾಗಿರುವ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ.
ಕೃತ್ಯವೆಸೆಗಿದ ಪಾಪಿ ಮಗನನ್ನು ಯನ್(58) ಹಾಗೂ ಸಮಾದಿಯಿಂದ ಜೀವ ಉಳಿಸಿಕೊಂಡ ಬಂದ ತಾಯಿಯನ್ನು ವಾಂಗ್(79) ಎಂದು ಗುರುತಿಸಲಾಗಿದೆ. ಮೇ 2 ರಂದು ಯನ್ ತನ್ನ ತಾಯಿಯನ್ನು ಚಕ್ರದ ಕೈಬಂಡಿಯಲ್ಲಿ ಕೂರಿಸಿಕೊಂಡು ಮನೆಯಿಂದ ಹೋಗಿದ್ದನು. ಆದರೆ ಬಳಿಕ ಮನೆಗೆ ಒಬ್ಬನೇ ವಾಪಸ್ ಬಂದಿದ್ದನು. ತಾಯಿಯ ಬಗ್ಗೆ ಯನ್ನನ್ನು ಆತನ ಪತ್ನಿ ವಿಚಾರಿಸಿದಾಗ ಏನೂ ಹೇಳದೆ ತನ್ನ ಪಾಡಿಗೆ ಸುಮ್ಮನಿದ್ದನು. ಇದರಿಂದ ಆತಂಕಕ್ಕೊಳಗಾದ ಪತ್ನಿ ನಮ್ಮ ಅತ್ತೆ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.
ಪತಿ ಅತ್ತೆಯನ್ನು ಕರೆದುಕೊಂಡು ಹೋಗಿದ್ದರು ಆದರೆ ಮನೆಗೆ ಒಬ್ಬರೆ ವಾಪಸ್ ಬಂದಿದ್ದಾರೆ, ಅತ್ತೆ ಎಲ್ಲಿದ್ದಾರೆ? ಅವರಿಗೆ ಏನಾಯಿತು ಎಂದು ಏನು ತಿಳಿಯುತ್ತಿಲ್ಲ ಎಂದು ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಈ ಬಗ್ಗೆ ವಿಚಾರಣೆ ನಡೆಸಿದಾಗ ಪಾಪಿ ಮಗನ ಕ್ರೂರ ಮುಖ ಬಯಲಾಗಿದೆ.
ಪಾರ್ಶ್ವವಾಯುಯಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳಲು ಮಗನಿಗೆ ಆಗುತ್ತಿರಲಿಲ್ಲ. ತಾಯಿಯ ಆರೈಕೆ ಮಾಡಿ ಮಾಡಿ ಮಗ ಬೇಸತ್ತು ಹೋಗಿದ್ದನು. ಹೀಗಾಗಿ ತಾಯಿಯನ್ನು ಜೀವಂತವಾಗಿ ಹೂತು ಹಾಕಿದ್ದನು. ಆದರೆ ಮಗ ಸಮಾಧಿ ಮಾಡಿ ಹೋದ ಬಳಿಕವೂ ತಾಯಿ ಜೀವಂತವಾಗಿದ್ದ ಕಾರಣ ರಕ್ಷಣೆಗಾಗಿ ಜೋರಾಗಿ ಕಿರುಚಾಡಿದ್ದರು. ಈ ವೇಳೆ ಕೂಗು ಕೇಳಿದ ಜನರು ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಘಟನೆ ನಡೆದ ಮೂರು ದಿನಗಳ ಬಳಿಕ ತಾಯಿ ಕೊಳಕು ಬಟ್ಟೆ ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಅವರನ್ನು ಗುರುತಿಸಿದ್ದಾರೆ ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.
ಚೀನಾದ ಶಾಂಕ್ಸಿ ಪ್ರಾಂತ್ಯದ ಜಿಂಗ್ ಬೈಯನ್ ಕೌಂಟಿಯಲ್ಲಿ ಆರೋಪಿ ಯನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪಾಪಿ ಮಗನ ವಿರುದ್ಧ ಕೊಲೆ ಯತ್ನದ ಪ್ರಕರಣ ಕೂಡ ದಾಖಲಿಸಿ, ವಿಚಾರಣೆ ಮುಂದುವರೆಸಿದ್ದಾರೆ. ಆದರೆ ಈ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ.
Comments are closed.