ಹೊಸ ದಿಲ್ಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಾಶ್ಮೀರ ಘಟಕದ ಮುಖ್ಯಸ್ಥ ರಿಯಾಜ್ ನಾಯ್ಕೂನನ್ನು ಭಾರತ ಸೇನೆ ಹೊಡೆದುರುಳಿಸಿದ ಬಳಿಕ, ಆ ಸಂಘಟನೆಯ ವರಿಷ್ಠ ನಾಯಕ ಸೈಯದ್ ಸಲಾಹುದ್ದೀನ್ ಬಿಲದಿಂದ ಹೊರಗೆ ಬಂದಿದ್ದಾನೆ..! ಅಮೆರಿಕದ ರಕ್ಷಣಾ ಇಲಾಖೆ ದಾಖಲೆಗಳ ಪ್ರಕಾರ ಜಾಗತಿಕ ಮಹಾ ಉಗ್ರ ಎಂದೇ ಗುರುತಿಸಲ್ಪಟ್ಟಿರುವ ಸೈಯದ್ ಸಲಾಹುದ್ದೀನ್, ಇದೀಗ ರಿಯಾಜ್ ಹತ್ಯೆಗೆ ಶ್ರದ್ಧಾಂಜಲಿ ಸಭೆ ಕರೆದು ಮಾತನಾಡಿದ್ದಾನೆ. ಈ ಸಭೆಯ ದೃಶ್ಯಾವಳಿ ಇದೀಗ ಎಲ್ಲೆಡೆ ವೈರಲ್ ಆಗಿದೆ. ಸಭೆಯಲ್ಲಿ ಸೈಯದ್ ಸಲಾಹುದ್ದೀನ್ ಮಾತನಾಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ.
2 ನಿಮಿಷಗಳ ಈ ವಿಡಿಯೋದಲ್ಲಿ ಸೈಯದ್ ಸಲಾಹುದ್ದೀನ್ ತನ್ನ ಸಂಘಟನೆಯ ಉಗ್ರ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾನೆ. ಹಂದ್ವಾರಾದಲ್ಲಿ ನಡೆದ ದಾಳಿಯಲ್ಲಿ 5 ಸೈನಿಕರು ಹಾಗೂ ಓರ್ವ ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದು ನಮ್ಮ ಸಂಘಟನೆಯವರೇ ಎಂದು ಸಲಾಹುದ್ದೀನ್ ಹೇಳಿಕೊಂಡಿದ್ದಾನೆ.
ಕಳೆದ ಬುಧವಾರ ಕಣಿವೆ ರಾಜ್ಯಾದ್ಯಂತ ಮೊಬೈಲ್ ಸಂಪರ್ಕ ಸ್ಥಗಿತಗೊಳಿಸಿದ್ದ ಭಾರತೀಯ ಸೇನೆ ಹಿಜ್ಬುಲ್ ಸಂಘಟನೆಯ ಕಾಶ್ಮೀರಿ ಮುಖ್ಯಸ್ಥ ರಿಯಾಜ್ ನಾಯ್ಕೂನನ್ನು ಹೊಡೆದುರುಳಿಸಿತ್ತು. 35 ವರ್ಷದ ರಿಯಾಜ್, ಗಣಿತದ ಪಾಠ ಮಾಡುತ್ತಿದ್ದ. ಆ ಬಳಿಕ ಉಗ್ರನಾಗಿ ಬದಲಾಗಿದ್ದ. ಈತನ ಸುಳಿವು ನೀಡಿದವರಿಗೆ 12 ಲಕ್ಷ ರೂ. ಬಹುಮಾನ ನೀಡೋದಾಗಿ ಸೇನೆ ಘೋಷಿಸಿತ್ತು. ಕಳೆದ 8 ವರ್ಷಗಳಿಂದ ರಿಯಾಜ್ ಕಣ್ತಪ್ಪಿಸಿ ಓಡಾಡುತ್ತಿದ್ದ. ಕಳೆದ ಬುಧವಾರ ಸತತ 5 ಗಂಟೆಗಳ ಗುಂಡಿನ ಕಾಳಗದ ಬಳಿಕ ರಿಯಾಜ್ನನ್ನು ಹತ್ಯೆಗೈಯ್ಯಲಾಯ್ತು.
ಇದಕ್ಕೂ ಒಂದೇ ದಿನ ಮೊದಲು ರಿಯಾಜ್ನ ಇಬ್ಬರು ಅತ್ಯಾಪ್ತರು ಪಂಜಾಬ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇವರಿಂದ ರಿಯಾಜ್ನ ಸುಳಿವು ಪಡೆದ ಸೇನೆ, ಬುರ್ಹಾನ್ ವಾನಿ ಬಳಿಕ ಕಾಶ್ಮೀರದಲ್ಲಿ ಹಿಜ್ಬುಲ್ ಸಂಘಟನೆ ಮುನ್ನಡೆಸುತ್ತಿದ್ದ ರಿಯಾಜ್ ನಾಯ್ಕೂನನ್ನು ಚೆಂಡಾಡಿ, ಹಂದ್ವಾರಾ ಎನ್ಕೌಂಟರ್ಗೆ ಪ್ರತೀಕಾರ ತೀರಿಸಿಕೊಂಡಿತು.
Comments are closed.