ಬೆಂಗಳೂರು(ಮೇ.11): ಮಾರಕ ಕೊರೋನಾ ವೈರಸ್ ದಿನೇದಿನೇ ತೀವ್ರಗತಿಯಲ್ಲಿ ಹರಡುತ್ತಿದೆ. ಇದರ ಪರಿಣಾಮ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇಡೀ ರಾಜ್ಯವನ್ನು ಲಾಕ್ಡೌನ್ ಮಾಡಿ ಬಹುತೇಕ ಸೇವೆಗಳನ್ನು ಸ್ತಬ್ಧಗೊಳಿಸಲಾಗಿತ್ತು. ಈ ಲಾಕ್ಡೌನ್ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ರೂ.10,675 ಕೋಟಿ ನಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.
ಇಡೀ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿದ್ದ ಕಾರಣ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಬರಬೇಕಿದ್ದ ಎಲ್ಲಾ ಆದಾಯ ಸ್ಥಗಿತಗೊಂಡಿತ್ತು. ತೆರಿಗೆ, ಅಬಕಾರಿ, ಅಂಚೆ ಚೀಟಿ, ನೋಂದಾವಣಿ, ಸಾರಿಗೆ(ಮೋಟಾರು ವಾಹನ)ಗಳಿಂದ ಬರಬೇಕಿದ್ದ ಆದಾಯ ಬರದ ಕಾರಣ ಇಷ್ಟು ಪ್ರಮಾಣದಲ್ಲಿ ನಷ್ಟ ಆಗಿದೆ ಎನ್ನಲಾಗುತ್ತಿದೆ.
ಇನ್ನು, ಏಪ್ರಿಲ್ ತಿಂಗಳಿನಲ್ಲಿ ಮಾತ್ರ ವಾಣಿಜ್ಯ ತೆರಿಗೆ ರೂ.6,870.25 ಕೋಟಿ, ಅಬಕಾರಿ ರೂ.1,891.6, ಅಂಚೆ ಮತ್ತು ನೋಂದಾವಣಿ ರೂ.1,054 ಕೋಟಿ ಹಾಗೂ ಸಾರಿಗೆ ರೂ.592.91 ಕೋಟಿ ಸಂಗ್ರಹವಾಗಿಬೇಕಿತ್ತು. ಆದರೀಗ, 10,675 ಕೋಟಿ ರೂ. ನಷ್ಟವಾದ್ದರಿಂದ, 2020-2021ರ ಆರ್ಥಿಕ ವರ್ಷದಲ್ಲಿ ಸುಮಾರು 1/12 ನೇ ಅಂದಾಜು ಆದಾಯವನ್ನು ಕಳೆದುಕೊಳ್ಳಲಾಗಿದೆ.
ಸದ್ಯ ಲಾಕ್ಡೌನ್ ಸಡಿಲಗೊಳಿಸಿದ ಬಳಿಕ ಅಬಕಾರಿ ಸುಂಕದ ಹೆಚ್ಚಳವೂ 2,530 ಕೋಟಿ ರೂ. ತಂದುಕೊಟ್ಟಿದೆ. 2019ನೇ ವರ್ಷದ ನವೆಂಬರ್ ತಿಂಗಳರವರೆಗೆ ಜಿಎಸ್ಟಿ ಪರಿಹಾರ ಸ್ವೀಕರಿಸಿದ ಪರಿಣಾಮ 5,000 ಕೋಟಿ ರೂ. ಬಾಕಿಯಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಇನ್ನು, ಲಾಕ್ಡೌನ್ನಿಂದಾಗಿ ದೇಶದ ಖಾಸಗಿ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಸಾರಿಗೆ ಸಂಸ್ಥೆಗಳು, ಅಂಗಡಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, 1 ತಿಂಗಳಿಗೆ ಸಂಬಳ ನೀಡಲು 130 ಕೋಟಿ ರೂ. ಬೇಕು. ಇಷ್ಟು ದೊಡ್ಡ ಮೊತ್ತವಿಲ್ಲದ ಕಾರಣ ಸಾರಿಗೆ ನಿಗಮಗಳ ನೌಕಕರಿಗೆ ಸಂಬಳ ನೀಡುವುದು ಕಷ್ಟಕರವಾಗಿದೆ.
Comments are closed.