ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ವಿದೇಶಗಳಲ್ಲಿ ಜೊತೆ ಜೊತೆಯಾಗಿ ಓಡಾಡಿಕೊಂಡು, ಅನೇಕ ಬಾರಿ ಗಾಸಿಪ್ ಕಾಲಂಗಳಿಗೆ ಆಹಾರವಾಗಿದೆ. ಆದರೆ, ಈ ಬಗ್ಗೆ ನಯನ್-ವಿಘ್ನೇಶ್ ಎಲ್ಲಿಯೂ ಅಧಿಕೃತ ಮಾತನಾಡಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವಿಘ್ನೇಶ್ ಮಾಡಿರುವ ಒಂದು ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ.
ಮೇ 10ರಂದು ವಿಶ್ವ ಅಮ್ಮಂದಿರ ದಿನ. ಅನೇಕ ಸೆಲೆಬ್ರಿಟಿಗಳು ತಮ್ಮ ಅಮ್ಮನ ಜೊತೆಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಕೋರಿದ್ದರು. ಅದೇ ರೀತಿ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್, ಮೊದಲು ತಮ್ಮ ತಾಯಿ ಹಾಗೂ ತಂಗಿಯ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡು, ‘ಹ್ಯಾಪಿ ಮದರ್ಸ್ ಡೇ’ ಎಂದಿದ್ದರು. ಆದರೆ, ನಂತರ ನಯನತಾರಾ ಅವರ ಫೋಟೋ ಶೇರ್ ಮಾಡಿ ಅವರು ಹಾಕಿದ ಕ್ಯಾಪ್ಷನ್ ಎಲ್ಲರ ಕಣ್ಣು ಕುಕ್ಕುತ್ತಿದೆ.
ಮಗುವೊಂದನ್ನು ನಯನತಾರಾ ಎತ್ತಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ವಿಘ್ನೇಶ್, ‘ಭವಿಷ್ಯದ ನನ್ನ ಮಕ್ಕಳ ತಾಯಿ ಎತ್ತಿಕೊಂಡಿರುವ ಈ ಮಗುವಿನ ತಾಯಿಗೆ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು’ ಎಂದಿದ್ದಾರೆ. ಅಲ್ಲಿಗೆ, ನನ್ನ ಮಕ್ಕಳಿಗೆ ನಯನತಾರಾ ತಾಯಿ ಆಗಲಿದ್ದಾರೆ ಎನ್ನುವ ಮೂಲಕ ತಮ್ಮಿಬ್ಬರ ಪ್ರೇಮ್ ಕಹಾನಿಯನ್ನು ಜಗತ್ತಿನ ಮುಂದಿಟ್ಟಿದ್ದಾರೆ ವಿಘ್ನೇಶ್.
ಅಂದಹಾಗೆ, 2012ರಲ್ಲಿ ತೆರೆಕಂಡ ‘ಪೋಡಾ ಪೋಡಿ’ ಚಿತ್ರದಿಂದ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ವಿಘ್ನೇಶ್ಗೆ ಬ್ರೇಕ್ ಕೊಟ್ಟ ಸಿನಿಮಾ ‘ನಾನುಮ್ ರೌಡಿಧಾನ್’. ಆ ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ನಟಿಸಿದ್ದರು. ಆಗಿನಿಂದಲೇ ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಆನಂತರ ಸ್ನೇಹ ಪ್ರೀತಿಯಾಗಿ ಮುಂದುವರಿದಿದೆ. ಇದೀಗ ಬಹಿರಂಗವಾಗಿ ತನ್ನ ಮಕ್ಕಳಿಗೆ ನಯನ್ ತಾಯಿ ಆಗಲಿದ್ದಾರೆ ಎಂದಿರುವ ವಿಘ್ನೇಶ್, ಶೀಘ್ರದಲ್ಲೇ ಮದುವೆ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರಾ ಎಂದು ನಯನ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಸದ್ಯ ನಯನತಾರಾ, ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ‘ಕಾದುವಾಕುಲ ರೆಂಡು ಕಾದಲ್’ ಚಿತ್ರವನ್ನು ವಿಘ್ನೇಶ್ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ, ನಯನ್ಗಾಗಿ ‘ನೆಟ್ರಿಕನ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
Comments are closed.