ಜಿನಿವಾ: ಕೊರೋನಾ ವೈರಸ್ ಸೋಂಕಿನ ಅಲೆ ಎರಡನೇ ಬಾರಿ ಪಸರಿಸುತ್ತಿರುವ ಬಗ್ಗೆ ತೀವ್ರ ಆತಂಕಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಲಾಕ್ ಡೌನ್ ಸಡಿಲಿಕೆ ಮಾಡಿ ಚಟುವಟಿಕೆಗಳನ್ನು ಆರಂಭಿಸುವಾಗ ದೇಶಗಳು ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.
ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜರ್ಮನಿಯಲ್ಲಿ ಕೋವಿಡ್-19 ಹೊಸ ಕೇಸುಗಳು ದಿಢೀರ್ ಏರಿಕೆಯಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ಘೋಷಿಸಿದೆ. ಕೊರೋನಾ ಕೇಸುಗಳು ಕಡಿಮೆಯಿದ್ದ ದಕ್ಷಿಣ ಕೊರಿಯಾದಲ್ಲಿ ಇದೀಗ ದಿಢೀರ್ ಏರಿಕೆಯಾಗಿದೆ. ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ನೈಟ್ ಕ್ಲಬ್ ಗಳ ಮೂಲಕ ಸೋಂಕು ವ್ಯಾಪಕವಾಗಿ ಹರಡಿದೆ ಎಂದು ಹೇಳಿದೆ.
ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಸಮಾಧಾನ ತಂದಿದೆ. ಆದರೆ ಕೊರೋನಾ ವೈರಸ್ ಸೋಂಕಿನ ಬಗ್ಗೆ ಇನ್ನು ಮುಂದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಸೋಂಕು ಸಣ್ಣ ಪ್ರಮಾಣದಲ್ಲಿ ಹುಟ್ಟಿಕೊಂಡು ಅದು ಮತ್ತೆ ಹರಡುವ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ ಮೈಕ್ ರ್ಯಾನ್ ಹೇಳಿದ್ದಾರೆ.
ಜರ್ಮನಿ ಮತ್ತು ದಕ್ಷಿಣ ಕೊರಿಯಾ ದೇಶಗಳು ಹೊಸ ರೀತಿಯಲ್ಲಿ ಕೊರೋನಾ ವೈರಸ್ ನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದ್ದು ಈ ದೇಶಗಳು ಕೈಗೊಂಡ ಕಟ್ಟುನಿಟ್ಟಾದ ಮತ್ತು ಯೋಜಿತ ಎಚ್ಚರಿಕೆ ಮಾರ್ಗಗಳು ಅನುಕರಣೀಯ. ಎರಡನೇ ಬಾರಿ ವೈರಸ್ ಹುಟ್ಟಿಕೊಂಡು ಹಬ್ಬುವುದನ್ನು ತಡೆಗಟ್ಟಬಹುದು ಎಂದು ರ್ಯಾನ್ ಹೇಳಿದ್ದಾರೆ.
Comments are closed.