ರಾಷ್ಟ್ರೀಯ

ವಿಶ್ವ ಬ್ಯಾಂಕ್ ನಿಂದ ಭಾರತಕ್ಕೆ 1 ಬಿಲಿಯನ್ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ಘೋಷಣೆ

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತೀಯ ಸರಕಾರದ ಕ್ರಮಗಳಿಗೆ ಮತ್ತಷ್ಟು ಉತ್ತೇಜನ ತುಂಬುವ ನಿಟ್ಟಿನಲ್ಲಿ ವಿಶ್ವ ಬ್ಯಾಂಕ್, ಒಂದು ಬಿಲಿಯನ್ ಅಮೆರಿಕನ್ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ಅನ್ನು ಘೋಷಿಸಿದೆ.

ಈ ಪ್ಯಾಕೇಜ್ ಭಾರತೀಯ ಸರಕಾರದ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಜೊತೆಗೆ ಸಹಯೋಗವನ್ನು ಹೊಂದಿರಲಿದೆ. ಇದು ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿರುವ ದೇಶದ ಬಡ ಹಾಗೂ ವಲಸೆ ಕಾರ್ಮಿಕರಿಗೆ ನೆರವಾಗಲಿದೆ.

ಕಳೆದ ತಿಂಗಳಷ್ಟೇ ತುರ್ತು ಪರಿಹಾರ ನಿಧಿ ಯೋಜನೆಯಡಿಯಲ್ಲಿ ವಿಶ್ವ ಬ್ಯಾಂಕ್, ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವನ್ನು ಘೋಷಿಸಿತ್ತು. ಇದರೊಂದಿಗೆ ಒಟ್ಟು ಸಹಾಯ ಮಾಡಿರುವ ಮೊತ್ತ 2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ವಿಶ್ವ ಬ್ಯಾಂಕ್ ಆರ್ಥಿಕ ನೆರವು, ಭಾರತವು ತನ್ನ 400ಕ್ಕೂ ಹೆಚ್ಚು ಸಾಮಾಜಿಕ ಭದ್ರತಾ ಯೋಜನೆಗಳನ್ನು ತಂತ್ರಜ್ಞಾನ ಮಟ್ಟದಲ್ಲಿ ಸಂಯೋಜಿಸಲು ಅನುವು ಮಾಡಿಕೊಡಲಿದೆ.

ಗ್ರಾಮೀಣ ಪ್ರದೇಶದಷ್ಟೇ ಅಲ್ಲದೆ ನಗರ ಪ್ರದೇಶದ ಬಡವರ ಕಡೆಗೆ ಸಾಮಾಜಿಕ ರಕ್ಷಣೆಯನ್ನು ಸಮತೋಲಿಸಲು ಈ ಯೋಜನೆ ನಿರ್ಣಾಯಕವಾಗಲಿದೆ ಎಂದು ವಿಶ್ವ ಬ್ಯಾಂಕ್ ದೇಶದ ನಿರ್ದೇಶಕ ಜುನೈದ್ ಅಹ್ಮದ್ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾವಲಂಬಿ ಯೋಜನೆ ಅತ್ಯಂತ ಮುಖ್ಯವೆನಿಸಿದ್ದು, ಜೀವನ ಹಾಗೂ ಜೀವನೋಪಾಯಗಳ ನಡುವೆ ಯಾವುದೇ ವ್ಯತ್ಯಾಸವನ್ನು ತೋರಿಸುತ್ತಿಲ್ಲ ಎಂದವರು ಸೇರಿಸಿದರು.

ಕೊರೊನಾ ವೈರಸ್‌ನಿಂದ ತತ್ತರಿಸಿ ಹೋಗಿರುವ ಭಾರತೀಯ ಆರ್ಥಿಕ ವ್ಯವಸ್ಥೆಗೆ ಬಲ ತುಂಬುವ ನಿಟ್ಟಿನಲ್ಲಿ ಮೇ 12ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

Comments are closed.