ರಾಷ್ಟ್ರೀಯ

20 ಲಕ್ಷ ಕೋಟಿ ರೂ ಪ್ಯಾಕೇಜ್​ನಲ್ಲಿ ನಿರ್ಮಲಾ ಸೀತಾರಾಮನ್ ಕೃಷಿ ವಲಯಕ್ಕೆ ಮಾಡಿದ ಘೋಷಣೆಗಳ ಮುಖ್ಯಾಂಶಗಳು

Pinterest LinkedIn Tumblr


ನವದೆಹಲಿ(ಮೇ 15): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಕೋಟಿ ಪ್ಯಾಕೇಜ್​ನ ಮೂರನೇ ಹಂತರದ ಘೋಷಣೆಗಳನ್ನು ಮಾಡಿದ್ದಾರೆ. ಇದರಲ್ಲಿ ಕೃಷಿ ಹಾಗೂ ಸಂಬಂಧಿತ ವಲಯಗಳಿಗೆ ವಿವಿಧ ಯೋಜನೆ ಮತ್ತು ಅನುದಾನ ಹಾಗೂ ಗುರಿಗಳನ್ನ ಪ್ರಕಟಿಸಿದ್ದಾರೆ. ಇದರಲ್ಲಿ ಪ್ರಮುಖವಾದುದು ಕೃಷಿ ಮಾರುಕಟ್ಟೆ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ನೀಡಿರುವುದು. ಇದರ ಜೊತೆಗೆ ಇನ್ನೂ ಹಲವು ಉತ್ತೇಜನಗಳನ್ನು ಸಚಿವರು ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಕೃಷಿ ವಲಯಕ್ಕೆ ಮಾಡಿದ ಘೋಷಣೆಗಳ ಮುಖ್ಯಾಂಶಗಳು:

* ಕೃಷಿ ಮೂಲಸೌಕರ್ಯ ಯೋಜನೆಗಳ ಜಾರಿಗೆ 1 ಲಕ್ಷ ಕೋಟಿ ರೂ. ಇದರಿಂದ ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯಾಗುವ ಆಶಯ ಇದೆ.

* ಸಣ್ಣ ಆಹಾರ ಉದ್ಯಮಗಳಿಗೆ ಪುಷ್ಟಿ ನೀಡಲು 10,000 ಕೋಟಿ ರೂ ಯೋಜನೆ – ದೇಶದಲ್ಲಿರುವ 2 ಲಕ್ಷ ಅಸಂಘಟಿತ ಸಣ್ಣ ಆಹಾರ ಉದ್ಯಮಗಳನ್ನು ಸಂಘಟಿತಗೊಳಿಸಲು ಸಾಧ್ಯವಾಗುತ್ತದೆ. ಗುಣಮಟ್ಟ ಹೆಚ್ಚಿಸಿ ರಫ್ತು ಮಾಡಲು ಅನುವು ಮಾಡಿಕೊಡುತ್ತದೆ.

* ಮೀನುಗಾರರಿಗೆ 20,000 ಕೋಟಿ ರೂ. – ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ –ಮೀನುಗಾರಿಕೆ ಬಂದರು, ಶೀತಲೀಕರಣ ವ್ಯವಸ್ಥೆ, ಮೀನು ಮಾರುಕಟ್ಟೆ, ಮೀನುಗಾರಿಕೆ ಚಟುವಟಿಕೆ ಇತ್ಯಾದಿಗಳಿಗೆ ಈ ಯೋಜನೆಯ ಹಣ ಬಳಕೆಯಾಗುತ್ತದೆ.

* ಪಶು ರೋಗ ನಿಯಂತ್ರ ಯೋಜನೆಗೆ 13,343 ಕೋಟಿ ರೂ. – ಕಾಲುಬಾಯಿ ಮೊದಲಾದ ರೋಗದ ಬಾಧೆ ಹೆಚ್ಚಾಗುತ್ತಿದೆ. ದೇಶದ ಪ್ರತಿಯೊಂದು ಹಸು, ಎಮ್ಮೆ, ಮೇಕೆ, ಕುರಿ ಮೊದಲಾದ ಪಶುಗಳಿಗೆ ಲಸಿಕೆ ನೀಡುವುದು ಗುರಿ.* ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿಗೆ 15,000 ಕೋಟಿ ರೂ. – ಡೈರಿ ಸಂಸ್ಕರಣ ಘಟಕಗಳಿಗೆ ಖಾಸಗಿ ಹೂಡಿಕೆಗೆ ಬೆಂಬಲ ನೀಡುವುದು ಇತ್ಯಾದಿ ಯೋಜನೆಗಳಿವೆ.

* ಔಷಧೀಯ ಸಸ್ಯಗಳ ಅಭಿವೃದ್ಧಿಗೆ 4,000 ಕೋಟಿ ರೂ.: 1 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳನ್ನ ಬೆಳೆಯುವುದು ಗುರಿ. ಇಂಥ ಸದಸ್ಯಗಳಿಗೆ ಪ್ರಾದೇಶಿಕ ಮಾರುಕಟ್ಟೆಗಳ ನೆಟ್​ವರ್ಕ್ ರೂಪಿಸುವುದು.

* ಜೇನು ಸಾಕಾಣಿಕೆಗೆ 500 ಕೋಟಿ ರೂ.: ಕೃಷಿಗಾರಿಕೆಯಲ್ಲಿ ಜೇನು ಹುಳುಗಳ ಪಾತ್ರ ಬಹಳ ಮಹತ್ವದ್ದು. ಪರಾಗಸ್ಪರ್ಶ ಕ್ರಿಯೆ ಮೂಲಕ ಜೇನುಹುಳಗಳು ಕೃಷಿಕರಿಗೆ ಸಹಾಯ ಮಾಡುತ್ತವೆ. ಈ ನಿಟ್ಟಿನಲ್ಲಿ ಜೇನು ಸಾಕಾಣಿಕೆಯ ಅಭಿವೃದ್ಧಿಗೆ 500 ಕೋಟಿ ರೂ ಇಡಲಾಗಿದೆ.

* ಆಪರೇಷನ್ ಗ್ರೀನ್​ಗೆ 500 ಕೋಟಿ ರೂ: ಟೊಮೆಟೋ, ಈರುಳ್ಳಿ ಮತ್ತು ಆಲೂಗಡ್ಡೆಗೆ ಮಾತ್ರ ಇದ್ದ ಆಪರೇಷನ್ ಗ್ರೀನ್ ಯೋಜನೆ ಈಗ ಎಲ್ಲಾ ಬೆಳೆಗಳಿಗೆ ವಿಸ್ತರಣೆ. ಈ ಯೋಜನೆಯಡಿ ರೈತರು ತಮ್ಮ ಹೆಚ್ಚುವರಿ ಬೆಳೆಗಳನ್ನ ತಮ್ಮಿಚ್ಛೆಯ ಮಾರುಕಟ್ಟೆಗೆ ಸಾಗಿಸಲು ತಗುಲುವ ಸಾಗಣೆ ವೆಚ್ಚದಲ್ಲಿ ಶೇ. 50 ಸಬ್ಸಿಡಿ ಪಡೆಯಬಹುದು. ಹಾಗೆಯೇ, ಬೆಳೆಗಳನ್ನು ದೀರ್ಘಕಾಲ ಕಾಪಾಡಲು ಕೋಲ್ಡ್ ಸ್ಟೋರೇಜ್​ಗಳಲ್ಲಿ ಸಂಗ್ರಹಿಸಲು ಶೇ. 50 ಸಬ್ಸಿಡಿ ನೀಡಲಾಗುತ್ತದೆ.

* ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲು ಅನುವಾಗುವಂತೆ “ಅಗತ್ಯ ವಸ್ತುಗಳ ಕಾಯ್ದೆ”ಗೆ ತಿದ್ದುಪಡಿ ತರುವ ಉದ್ದೇಶವಿದೆ.

* ರೈತರು ತಮ್ಮ ಉತ್ಪನ್ನವನ್ನು ಬೇರೆ ರಾಜ್ಯಗಳ ಮಾರುಕಟ್ಟೆಗೆ ಮಾರುವಂತೆ ಕಾನೂನು ಬದಲಾವಣೆ; ಇ ಮಾರುಕಟ್ಟೆಗೂ ಅವಕಾಶ ಇರುವಂತೆ ಸುಧಾರಣೆಗಳನ್ನು ತರಲಾಗುವುದು.

Comments are closed.