ಭಾರತೀಯ ಮದುವೆಗಳಲ್ಲಿ ನಾವು ಸಾಕಷ್ಟು ಶಾಸ್ತ್ರಗಳನ್ನು ನೋಡಬಹುದು. ಇಲ್ಲಿನ ಮದುವೆಗಳಲ್ಲಿ ಮೆಹಂದಿ ಶಾಸ್ತ್ರ ಕೂಡ ಒಂದು. ಈ ಶಾಸ್ತ್ರ ಕೆಲವೆಡೆ ನಂಬಿಕೆಯಾದರೆ, ಕೆಲವೆಡೆ ಮೂಢನಂಬಿಕೆಯಾಗಿದೆ. ಮೆಹಂದಿ ಶಾಸ್ತ್ರದಲ್ಲಿನ ಮೂಢನಂಬಿಕೆಗಳು ಹೀಗಿವೆ…
ಭಾರತೀಯ ಮದುವೆ ಸಂಪ್ರದಾಯಗಳಲ್ಲಿ ಮದರಂಗಿ ಶಾಸ್ತ್ರ ಅಥವಾ ಮೆಹಂದಿ ಶಾಸ್ತ್ರ ಅರಶಿಣ ಶಾಸ್ತ್ರದಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಧು-ವರರಿಗೆ ಮದರಂಗಿಯಿಲ್ಲದೇ ಭಾರತದಲ್ಲಿ ಮದುವೆಯೇ ನಡೆಯಲಾರದು. ಮೊದಲು ಕೇವಲ ಉತ್ತರ ಭಾರತದಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಮೆಹಂದಿ ಶಾಸ್ತ್ರ ದಿನಕಳೆದಂತೆ ಇದೀಗ ದಕ್ಷಿಣ ಭಾರತದಲ್ಲೂ ಕೂಡ ಆಚರಣೆಗೆ ಬಂದಿದೆ.
ನೋಡುಗರಿಗೆ ಇದು ಅಲಂಕಾರಿಕವಾಗಿ ಕಂಡರೂ ಇದೊಂದು ಮದುವೆಯ ಶುಭಸಮಾರಂಭವನ್ನು ಸೂಚಿಸುವ ಒಂದು ಶಾಸ್ತ್ರ. ಕೇವಲ ಶುಭಸಮಾರಂಭಗಳಲ್ಲಿ ಮಾತ್ರ ಹಚ್ಚಿಕೊಳ್ಳುವ ಈ ಮೆಹಂದಿಯನ್ನು ಮದುವೆಯ ಸಂದರ್ಭದಲ್ಲಿ ಮಾತ್ರವಲ್ಲ, ಇನ್ನುಳಿದ ಹಬ್ಬ, ಹರಿದಿನಗಳಲ್ಲೂ ಕೂಡ ಹಚ್ಚಿಕೊಳ್ಳುತ್ತಾರೆ. ಹೆಣ್ಣುಮಕ್ಕಳಿಗೆ ಮೆಹಂದಿ ಹಚ್ಚಿಕೊಳ್ಳುವುದರಲ್ಲೇನೋ ಸಂಭ್ರಮ, ಸಡಗರ. ಮೆಹಂದಿ ಹಚ್ಚಿಕೊಂಡ ಮೇಲಂತೂ ಎಷ್ಟು ಕೆಂಪಾಗಬಹುದೆನ್ನುವ ಭಾವನಾ ಲೋಕದಲ್ಲೇ ಇರುತ್ತಾರೆ.
ಮೆಹಂದಿ ಹಾಕಿದರೆ ಮಾತ್ರ ಆ ಮದುಮಗಳಿಗೇನೋ ಮದುವೆಯ ಕಳೆ ಎಂಬಂತೆ ಎನಿಸುತ್ತದೆ. ಜಾತಿ ಭೇದ – ಭಾವವಿಲ್ಲದೆ ಮೆಹಂದಿಯನ್ನು ಶುಭ ಕಾರ್ಯಗಳಲ್ಲಿ ಎಲ್ಲರೂ ಕೂಡ ಹಾಕುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಮದರಂಗಿಯನ್ನು ಮದುಮಗಳ ಅಂದ ಹೆಚ್ಚಿಸಲು ಹಾಕಿದರೆ, ಇನ್ನು ಕೆಲವು ಸಂಪ್ರದಾಯಗಳಲ್ಲಿ ಮದರಂಗಿ ಹಾಕುವುದು ಒಂದು ಶಾಸ್ತ್ರವಾಗಿಬಿಟ್ಟಿದೆ. ಮದುಮಗಳ ಕೈಗಳಿಗೆ ಮದುವೆ ದಿನಕ್ಕಿಂತ ಮುಂಚೆ ಮದರಂಗಿ ಹಾಕಿದರೆ ಆಕೆಯ ವೈವಾಹಿಕ ಜೀವನ ಸುಖ, ಶಾಂತಿ, ಸಮೃದ್ಧಿ, ಮೆಟ್ಟಿದ ಮನೆಗೆ ಶುಭವನ್ನು ತರುತ್ತದೆ ಎಂಬ ನಂಬಿಕೆಯಿಂದ ಮೆಹಂದಿ ಶಾಸ್ತ್ರವನ್ನು ಮಾಡಲಾಗುತ್ತದೆ.
ಮದುವೆಯಲ್ಲಿ ಮದುಮಗಳಿಗೆ ಮೆಹಂದಿಯನ್ನು ಏಕೆ ಹಾಕಲಾಗುತ್ತದೆ ಎನ್ನುವ ಪ್ರಶ್ನೆಗೆ ಸಾಂಪ್ರದಾಯಿಕವಾಗಿಯೂ ಉತ್ತರ ಕೊಡಬಹುದು ಹಾಗೇ ವೈಜ್ಞಾನಿಕವಾಗಿಯೂ ಕೂಡ ಉತ್ತರ ನೀಡಬಹುದು. ಈ ಮೇಲೆ ಹೇಳಿರುವಂತೆ ಸುಖ, ಶಾಂತಿ, ಸಮೃದ್ಧಿಯು ಸಾಂಪ್ರಧಾಯಿಕ ಉತ್ತರವಾದರೆ, ಇನ್ನು ಮದುಮಗಳು ಮೆಹಂದಿ ಹಚ್ಚಿಕೊಳ್ಳಲು ಹಲವಾರು ವೈಜ್ಞಾನಿಕ ಕಾರಣಗಳೂ ಕೂಡ ಇವೆ. ವೈಜ್ಞಾನಿಕವಾಗಿ ಹೇಳುವುದಾದರೆ, ಮದುವೆ ಹತ್ತಿರ ಬರುತ್ತಿದ್ದಂತೆ ಮನೆಯವರಿಗೆ ಮಾತ್ರವಲ್ಲ, ಮದುಮಗಳೂ ಕೂಡ ಭಯ, ಆಯಾಸ, ಒತ್ತಡದಿಂದಿರುತ್ತಾಳೆ. ಒತ್ತಡ ಹೆಚ್ಚಾದಂತೆ ತಲೆನೋವು, ಜ್ವರ ಬರಬಹುದೆಂದು ತಿಳಿದು, ಇದನ್ನು ನಿವಾರಿಸಲು ಔಷಧೀಯ ಗುಣವುಳ್ಳ ಮೆಹಂದಿಯನ್ನು ಮದುಮಗಳಿಗೆ ಹಚ್ಚಲಾಗುತ್ತದೆ.
ಮದುಮಗಳಿಗೆ ಹಚ್ಚುವ ಮೆಹಂದಿಯಲ್ಲಿ ಕೆಲವೊಂದು ನಂಬಿಕೆಗಳು ಕೂಡ ಅಡಗಿವೆ. ಇದು ಕೆಲವರಿಗೆ ನಂಬಿಕೆಯಾದರೆ, ಇನ್ನು ಕೆಲವರಿಗೆ ಇದು ಮೂಢನಂಬಿಕೆಯಾಗಿದೆ. ಮದುವೆ ದಿನಕ್ಕೂ ಮುನ್ನ ಸಾಮಾನ್ಯವಾಗಿ ಮದುಮಗಳ ಕೈಗೆ ಮೆಹಂದಿಯನ್ನು ಹಾಕಲಾಗುತ್ತದೆ. ಕೇವಲ ಮದುಮಗಳಿಗೆ ಮಾತ್ರವಲ್ಲ, ಆಕೆಯ ಸಂಬಂಧಿಕರಿಗೆ, ಮನೆಯವರಿಗೂ ಕೂಡ ಹಚ್ಚಿದ ಮದರಂಗಿ ಯಾವ ಬಣ್ಣವನ್ನು ಪಡೆದುಕೊಳ್ಳಲಿದೆ ಎಂದು ನೋಡಲು ಕಾತುರರಾಗಿರುತ್ತಾರೆ. ಮದುಮಗಳ ಕೈಗೆ ಹಚ್ಚಿದ ಮದರಂಗಿಯ ಬಣ್ಣ ಒಂದು ವೇಳೆ ಕಡು ಕೆಂಪು ಬಣ್ಣಕ್ಕೆ ತಿರುಗಿದರೆ ಮದುವೆಯಾದ ನಂತರ ಅತ್ತೆ – ಸೊಸೆಯ ಸಂಬಂಧ ಚೆನ್ನಾಗಿರುತ್ತದೆ ಎನ್ನುವ ನಂಬಿಕೆ ಭಾರತೀಯ ಸಂಪ್ರದಾಯದಲ್ಲಿದೆ.
ಕೆಲವೆಡೆ ಮದುಮಗಳ ಕೈಯಲ್ಲಿ ಆಕೆಯು ಮದುವೆಯಾಗಲಿರುವ ಹುಡುಗನ ಹೆಸರನ್ನು ಬರೆಯುವ ಸಂಪ್ರಧಾಯ ಕೂಡ ಇದೆ. ಹೀಗೆ ಮದುಮಗಳ ಕೈಯಲ್ಲಿ ಹುಡುಗನ ಹೆಸರು ಬರೆಯದೇ ಹೋದರೆ ಆತ ಮದುವೆಯಾದ ನಂತರ ಹಹೆಂಡತಿಯ ತಾಳಕ್ಕೆ ತಕ್ಕಂತೆ ಕುಣಿಯುವ ಗಂಡನಾಗುತ್ತಾನೆ ಎನ್ನುವ ನಂಬಿಕೆಯಿದೆ. ಆದ್ದರಿದ ಕೆಲವೆಡೆ ಮದುವೆಯಾಗಲಿರುವ ಹುಡುಗಿಯ ಕೈಯಲ್ಲಿ ಹುಡುಗನ ಹೆಸರನ್ನು ಬರೆಯಲಾಗುತ್ತದೆ. ಕೇಳಲು ಇದು ತಮಾಷೆಯಂತ್ತಿದ್ದರೂ ಕೂಡ ನಂಬಿಕೆಯ ಪ್ರತೀಕವಾಗಿದೆ.
ಮದುವೆಯಾಗುವ ಹುಡುಗಿಯ ಸಹೋದರನ ರಕ್ಷಣೆಗೂ ಕೂಡ ಮೆಹಂದಿಯನ್ನು ಹಾಕಲಾಗುತ್ತದೆ. ಹಿಂದೂ ಧರ್ಮದ ಕೆಲವೊಮದು ಪಂಗಡಗಳಲ್ಲಿ ಮದುವೆಯಾಗಲಿರುವ ಹುಡುಗಿಯ ಸಹೋದರನಿಗೆ ಒಳ್ಳೆಯದಾಗಲಿ, ಸಹೋದರ – ಸಹೋದರಿಯರ ಬಾಂದವ್ಯ ಹೀಗೆ ಸುಖವಾಗಿರಲಿ ಎಂದು ಸಹೋದರನ ಕೈಯ ಹಿಂಬದಿಗೆ ಮೆಹಂದಿಯನ್ನು ಹಾಕುವ ರೂಢಿಯಿದೆ. ಇನ್ನು ಕೆಲವೆಡೆ ಮದುಮಗಳಿಗೆ ಹಾಕುದ ಮೆಹಂದಿ ಒಣಗಿದ ನಂತರ ಅದನ್ನು ತೆಗೆಯುವ ಆಕೆಯೊಂದಿಗೆ ಮದುವೆಯಾಗದ ಕನ್ಯೆಯಿದ್ದರೆ ಆಕೆಗೂ ಕೂಡ ಆದಷ್ಟು ಬೇಗ ಕಂಕಣ ಬಲ ಕೂಡಿ ಬರುತ್ತದೆ ಎನ್ನುವ ನಂಬಿಕೆಯೂ ಕೂಡ ಇದೆ.
ಮೆಹಂದಿ ಶಾಸ್ತ್ರ ವು ನಂಬಿಕೆಯಾಗಿರಲಿ ಅಥವಾ ಮೂಢನಂಬಿಕೆಯಾಗಿರಲಿ ಈ ಶಾಸ್ತ್ರದಿಂದ ಮದುವೆಯಗುತ್ತಿರುವ ಹುಡುಗಿಯ ಮಾತ್ರವಲ್ಲ, ಅವರ ಕುಟುಂಬವರ್ಗದವರ ಮನಸ್ಸು ಪ್ರಶಾಂತವಾಗಿರುತ್ತದೆ. ಆ ಸಂತಸದ ಸಂದರ್ಭದಲ್ಲಿ ಅವರ ಒತ್ತಡ ನಿವಾರಣೆಯಾಗುತ್ತದೆ.
Comments are closed.