ಬಾಲಿವುಡ್ ಕಿರುತೆರೆ ಲೋಕಕ್ಕೆ ಇಂದು (ಮೇ 16) ವಿಷಾದನೀಯ ಸುದ್ದಿಯೊಂದು ಧುತ್ತನೆ ಎರಗಿ ಬಂದಿದೆ. ಹಿಂದಿಯ ‘ಕಹಾನಿ ಘರ್ ಘರ್ ಕಿ’ ಧಾರಾವಾಹಿಯ ನಟ ಸಚಿನ್ ಕುಮಾರ್ ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಹಿಂದಿ ಕಿರುತೆರೆ ನಟರಾದ ರಾಕೇಶ್ ಪೌಲ್, ಚೇತನ್ ಹನ್ಸರಾಜ್, ವಿನೀತ್ ರೈನಾ, ಸುರಭಿ ತಿವಾರಿ ಮುಂತಾದವರು ಸಚಿನ್ ನಿಧನ ಸುದ್ದಿಯಿಂದ ಶಾಕ್ ಆಗಿದ್ದು ಸಂತಾಪ ಸೂಚಿಸಿದ್ದಾರೆ. ಸುದೀರ್ಘ ಸಮಯದ ಹಿಂದೆಯೇ ಸಚಿನ್ ನಟನೆಗೆ ಗುಡ್ ಬೈ ಹೇಳಿ ಫೋಟೋಗ್ರಫಿಯಲ್ಲಿ ತೊಡಗಿಕೊಂಡಿದ್ದರು.
ಈ ಬಗ್ಗೆ ಮಾತನಾಡಿರುವ ಕಿರುತೆರೆ ನಟ ರಾಕೇಶ್ ಪೌಲ್, “ಹೌದು ಈ ಸುದ್ದಿ ನಿಜಕ್ಕೂ ದುಃಖಕರ. ಕೊನೆಯದಾಗಿ ಅವರನ್ನು ನಾನು ನೋಡಲು ಆಗಲಿಲ್ಲ. ಅಷ್ಟೊತ್ತಿಗಾಗಲೆ ಅವರ ದೇಹವನ್ನು ಚಿತಾಗಾರಕ್ಕೆ ಸಾಗಿಸಲಾಗಿತ್ತು. ತನ್ನ ಕೊಠಡಿ ಬಾಗಿಲು ಹಾಕಿಕೊಂಡು ರಾತ್ರಿ ಮಲಗಿದವರು ಬೆಳಗ್ಗೆ ಬಾಗಿಲು ತೆಗೆದಿರಲಿಲ್ಲ. ಅವರ ತಂದೆತಾಯಿ ಸಾಕಷ್ಟು ಪ್ರಯತ್ನಿಸಿ ಕೊನೆಗೆ ಬಾಗಿಲು ತೆರೆದು ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ತಂದೆತಾಯಿಯ ಜೊತೆಗೆ ವಾಸವಾಗಿದ್ದರು. ಬಹುಶಃ ತಡರಾತ್ರಿ ಅಥವಾ ಮುಂಜಾನೆ ಅವರಿಗೆ ಹೃದಯಾಘಾತವಾಗಿರಬಹುದು” ಎಂದಿದ್ದಾರೆ.
ನಮ್ಮಿಬ್ಬರದ್ದೂ ಎರಡು ದಶಕಗಳ ಗೆಳೆತನ. ಆಗ ನನ್ನ ಬಳಿ ಮಾರುತಿ 800 ಇತ್ತು, ಸಚಿನ್ ಬಳಿ ಫಿಯೆಟ್ ಕಾರಿತ್ತು. ಒಂದೇ ಏರಿಯಾದಲ್ಲಿ ಸಹೋದರರಂತೆ ವಾಸವಾಗಿದ್ದೆವು. ಪ್ರತಿ ಸಲ ಫೋನ್ ಮಾಡಿದಾಗಲೂ ಮತ್ತೆ ಮತ್ತೆ ಸಿಗೋಣ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಅವರನ್ನು ಭೇಟಿಯಾದಾಗ ಪಕೋಡ ಮಾಡಿ ಸ್ವತಃ ತಿನ್ನಿಸಿದ್ದ.
“ಕಳೆದ ಬಾರಿಯ ಹುಟ್ಟುಹಬ್ಬಕ್ಕೆ ನಾನು ಗೈರುಹಾಜರಾಗಿದ್ದೆ. ಆ ಸಂದರ್ಭದಲ್ಲಿ ಅವರ ಪೋಸ್ಟ್ಗೆ ಕಾಮೆಂಟ್ ಮಾಡಿ, ನಿನ್ನ ಪಕೋಡಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದಿದ್ದೆ. ಜೀವನ ಹೇಗೆ ಎಂದು ಹೇಳುವುದೇ ಕಷ್ಟ. ಅವರ ನಿಧನದಿಂದ ಮನಸ್ಸಿಗೆ ತೀವ್ರ ನೋವಾಗಿದೆ ಎಂದಿದ್ದಾರೆ ರಾಕೇಶ್.
ಬಿನೈಫರ್ ಕೋಹ್ಲಿ ನಿರ್ಮಾಣದ ಲಜ್ಜಾ ಎಂಬ ಶೋನಲ್ಲೂ ಸಚಿನ್ ಕುಮಾರ್ ಕಾಣಿಸಿಕೊಂಡಿದ್ದರು. ಈ ಶೊನಲ್ಲಿ ಅವರದು ನೆಗಟೀವ್ ಪಾತ್ರವಾಗಿತ್ತು.
Comments are closed.