ನವದೆಹಲಿ: ಇಡೀ ಮನುಕುಲಕ್ಕೆ ಕೊರೋನಾ ವೈರಸ್ ಮಾರಕವಾಗಿ ಪರಿಣಮಿಸಿದ್ದು, ಮಹಾಮಾರಿ ವೈರಸ್’ಗೆ ಈವರೆಗೂ ಯಾವುದೇ ಔಷಧಿಗಳೂ ಲಭ್ಯವಾಗಿಲ್ಲ. ಈ ನಡುವಲ್ಲೇ ಹೆಮ್ಮಾರಿ ವೈರಸ್ ಕೊರೋನಾ ವ್ಯಕ್ತಿಯ ಮೃತದೇಹದಲ್ಲಿ ಎಷ್ಟು ದಿನಗಳ ಕಾಲ ಬದುಕಬಲ್ಲದು ಎಂಬುದರ ಕುರಿತು ಅಧ್ಯಯನ ನಡೆಸಲು ಏಮ್ಸ್ ವೈದ್ಯರು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸದರೆ, ವೈರಸ್ ಯಾವ ರೀತಿ ಹರಡುತ್ತಿದೆ?..ಮನುಷ್ಯನ ದೇಹದಲ್ಲಿರುವ ಅಂಗಾಂಗಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬರಲಿದೆ ಎಂದು ದೆಹಲಿ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಅವರು ಹೇಳಿದ್ದಾರೆ.
ಅಧ್ಯಯನಕ್ಕೆ ಕೊರೋನಾದಿಂದ ಸತ್ತ ವ್ಯಕ್ತಿಯ ಮೃತದೇಹವನ್ನು ಬಳಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಂಬಂಧಪಟ್ಟಂತಹ ಅಧಿಕಾರಿಗಳ ಅನುಮತಿ ಪಡೆಯಲಾಗುತ್ತದೆ. ಅಧ್ಯಯನದಲ್ಲಿ ಪ್ಯಾಥೋಲಜಿ ಹಾಗೂ ಮೈಕ್ರೋಬಯಾಲಜಿ ಇಲಾಖೆಗಳೂ ಕೂಡ ಕೈಜೋಡಿಸಲಿವೆ. ಇಂತಹ ರೀತಿಯ ಅಧ್ಯಯನ ಇದೇ ಮೊದಲಾಗಿದ್ದು, ಸೂಕ್ತ ರೀತಿಯಲ್ಲಿ ಯೋಜನೆ ನಡೆಸಿ ಅಧ್ಯಯನ ನಡೆಸಬೇಕಿದೆ. ಅಧ್ಯಯನದಿಂದ ಮನುಷ್ಯನ ದೇಹದಲ್ಲಿ ವೈರಸ್ ಯಾವ ರೀತಿ ವರ್ತನೆ ತೋರುತ್ತದೆ ಹಾಗೂ ಅಂಗಾಂಗಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ಬಿಡುಗಡೆ ಮಾಡಿದ್ದ ಐಸಿಎಂಆರ್ ಹಾಗೂ ಸಿಒವಿಐಡಿ, ಕೊರೋನಾ ಶ್ವಾಸಕೋಶದ ಸೋಂಕಾಗಿದ್ದು, ಏರೋಸಾಲ್ ಮೂಲಕ ಹರಡುತ್ತದೆ ಎಂದು ತಿಳಿಸಿತ್ತು.
ಈ ವರೆಗೂ ದೊರೆತಿರುವ ವೈಜ್ಞಾನಿಕ ವರದಿಗಳ ಪ್ರಕಾರ, ಸತ್ತ ವ್ಯಕ್ತಿಯ ಮೃತದೇಹದಲ್ಲಿ ವೈರಸ್ ಬದುಕುಳಿಯಲಿದ್ದು, ಸಮಯ ಕಳೆದಂತೆ ಅದರ ಪರಿಣಾಮ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ. ಆದರೆ, ಎಷ್ಟು ಸಮಯದವರೆಗೂ ಬದುಕುಳಿಯಲಿದೆ ಎಂಬುದು ಸ್ಪಷ್ಟವಾಗಿರಲಿಲ್ಲ.
Comments are closed.