ಕರ್ನಾಟಕ

ಮೇ 31ರೊಳಗೆ ಸಾಲ ಮರುಪಾವತಿ ಮಾಡದಿದ್ದರೆ ‘ಶೂನ್ಯಬಡ್ಡಿ ಲೋನ್‌’ ಇಲ್ಲ!

Pinterest LinkedIn Tumblr


ಬೆಂಗಳೂರು: ರೈತರಿಗೆ ಕೃಷಿ ಸಾಲದಲ್ಲಿ ಶೂನ್ಯ ಬಡ್ಡಿ ದರದ ಸೌಲಭ್ಯ ಪಡೆಯಲು ಇದೇ ಮೇ 31ಕ್ಕೆ ಮರುಪಾವತಿಯ ಗಡುವು ಅಂತ್ಯವಾಗಲಿದೆ. ಹೀಗಾಗಿ ಮೇ 31ರೊಳಗೆ ಸಾಲ ಮರು ಪಾವತಿಸದಿದ್ದರೆ ಅಂಥ ರೈತರಿಗೆ ಶೂನ್ಯ ಬಡ್ಡಿ ದರ ಕೈತಪ್ಪುವ ಸಾಧ್ಯತೆ ಇದೆ.

ರಾಜ್ಯ ಸರಕಾರ ಜೂನ್‌ 30ರ ತನಕ ಸಾಲ ಮರು ಪಾವತಿಯ ಅವಧಿಯನ್ನು ವಿಸ್ತರಿಸಿದ್ದರೂ, ಕೇಂದ್ರ ಸರಕಾರ ಮತ್ತು ಆರ್‌ಬಿಐನಿಂದ ಯಾವುದೇ ಅಧಿಸೂಚನೆ ಬಂದಿಲ್ಲ. ಹೀಗಾಗಿ ಶೂನ್ಯ ಬಡ್ಡಿ ದರದ ಸೌಲಭ್ಯ ಪಡೆಯಲು ಮೇ 31ರೊಳಗೆ ಕೃಷಿ ಸಾಲ ಮರು ಪಾವತಿಸಲು ಸಹಕಾರಿ ಬ್ಯಾಂಕ್‌ಗಳು ರೈತರಿಗೆ ತಿಳಿಸಿವೆ.

ಲಾಕ್‌ ಡೌನ್‌ ಅವಧಿಯಲ್ಲಿಬಹುತೇಕ ರೈತರು ಕೃಷಿ ಸಾಲವನ್ನು ಕಟ್ಟಿಲ್ಲ. ಹೀಗಾಗಿ ಶೂನ್ಯ ಬಡ್ಡಿ ದರದಲ್ಲಿಕೇಂದ್ರ ಸರಕಾರದ ಪಾಲನ್ನು ರಾಜ್ಯ ಸರಕಾರ ಪಾವತಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ರೈತಪರ ಸಂಘಟನೆಗಳು ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿವೆ.

ಕೇಂದ್ರ ಸರಕಾರ ನಬಾರ್ಡ್‌ ಮೂಲಕ ರೈತರಿಗೆ 3 ಲಕ್ಷ ರೂ.ವರೆಗಿನ ಕೃಷಿ ಸಾಲದ ಬಡ್ಡಿಯಲ್ಲಿಶೇ.2ರಷ್ಟು ಬಡ್ಡಿ ಸಬ್ಸಿಡಿ ಮತ್ತು ಸಕಾಲದಲ್ಲಿಮರು ಪಾವತಿಗೆ ಶೇ.3ರಂತೆ ಹೆಚ್ಚುವರಿ ಬಡ್ಡಿ ಸಬ್ಸಿಡಿಯ ನೆರವು ನೀಡುತ್ತದೆ. ಆದರೆ ಇದನ್ನು ಪಡೆಯಲು ಮೇ 31ರೊಳಗೆ ಸಾಲದ ಮರು ಪಾವತಿಯ ಅಗತ್ಯ ಇದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿಸರಕಾರ ಬಡ್ಡಿ ಸಬ್ಸಿಡಿ ಸೌಲಭ್ಯದ ನೆರವನ್ನು ಮೇ 31ರ ತನಕ ವಿಸ್ತರಿಸಿತ್ತು. ಆದರೆ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ರೈತರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕಬ್ಬು ಬೆಳೆಗಾರರಿಗೆ 3,500 ಕೋಟಿ ರೂ. ಬಾಕಿ: ”ಲಾಕ್‌ಡೌನ್‌ ಅವಧಿಯಲ್ಲಿರೈತರು ಭಾರಿ ಸಂಕಷ್ಟದಲ್ಲಿದ್ದಾರೆ. ಆಹಾರ ಧಾನ್ಯ, ತರಕಾರಿ, ಹಣ್ಣುಗಳ ಬೆಲೆ ಕುಸಿದು ಕಷ್ಟದಲ್ಲಿದ್ದಾರೆ. ರಾಜ್ಯದ ಕಬ್ಬು ಬೆಳೆಗಾರರಿಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ 3,500 ಕೋಟಿ ರೂ. ಬಾಕಿ ಬರಬೇಕಾಗಿದೆ. ಹೀಗಾಗಿ ಎಲ್ಲರೀತಿಯ ಕೃಷಿ ಸಾಲಗಳಿಗೆ 2021ರ ಮಾರ್ಚ್ 31ರ ಮರು ಪಾವತಿಗೆ ಗಡುವು ವಿಸ್ತರಿಸಬೇಕು. ಹಾಗೂ ಹೊಸತಾಗಿ ಕೃಷಿ ಸಾಲ ವಿತರಣೆಗೆ ಬ್ಯಾಂಕ್‌ಗಳಿಗೆ ಆದೇಶಿಸಬೇಕು,” ಎಂದು ಆರ್‌ಬಿಐ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ.

ಶೇ.96 ರೈತರಿಂದ ಸಾಲ ಮರು ಪಾವತಿ: ಇತ್ತೀಚೆಗೆ ನಡೆಸಿರುವ ಪರಾಮರ್ಶೆಯ ಪ್ರಕಾರ, ಸಹಕಾರಿ ಬ್ಯಾಂಕ್‌ಗಳ ಮೂಲಕ ಕೃಷಿ ಸಾಲ ತೆಗೆದುಕೊಂಡಿರುವ ರಾಜ್ಯದ ಶೇ.96ರಷ್ಟು ರೈತರು ಈಗಾಗಲೇ ಸಾಲ ಮರು ಪಾವತಿ ಮಾಡಿದ್ದಾರೆ. ಹೀಗಾಗಿ ಹೊಸ ಸಾಲ ತೆಗೆದುಕೊಳ್ಳಲು ಅವರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಸಿಇಒ ಎಂ.ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.

“ಆರ್‌ಬಿಐ ಆಗಸ್ಟ್‌ ತನಕ ಶೂನ್ಯ ಬಡ್ಡಿ ದರ ವಿಸ್ತರಣೆಗೆ ಅನುವು ಕಲ್ಪಿಸಿದೆ ಎಂಬ ವರದಿಗಳಿವೆ. ಆದರೆ ಇನ್ನೂ ಅಧಿಕೃತ ಆದೇಶ ಬರಬೇಕಾಗಿದೆ. ಗಡುವು ವಿಸ್ತರಣೆಯಾದರೆ ಶೂನ್ಯ ಬಡ್ಡಿ ದರ ಸೌಲಭ್ಯ ಮುಂದುವರಿಯಲಿದೆ. ಹೀಗಿದ್ದರೂ, ರಾಜ್ಯ ಸರಕಾರದ ಬಡ್ಡಿ ಸಹಾಯಧನ ಜೂನ್‌ ಅಂತ್ಯದವರೆಗೂ ಸಿಗಲಿದೆ.”
-ಎಂ. ವೆಂಕಟಸ್ವಾಮಿ, ಸಿಇಒ, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌, ಬೆಂಗಳೂರು

Comments are closed.