ಕರಾವಳಿ

ತೊಕ್ಕೊಟ್ಟು : ನಿಂತಿದ್ದ ಕಂಟೈನರ್‌ ಲಾರಿಗೆ ಕಾರು ಢಿಕ್ಕಿ – ಓರ್ವ ಮೃತ್ಯು – ಐವರಿಗೆ ಗಾಯ

Pinterest LinkedIn Tumblr

ಮಂಗಳೂರು: ರಸ್ತೆ ಬದಿ ನಿಂತಿದ್ದ ಕಂಟೈನರ್‌ ಲಾರಿಗೆ ಕಾರೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸಾವನ್ನಪ್ಪಿದ್ದು, ಇತರ ಐದು ಮಂದಿ ಗಾಯಗೊಂಡ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ (ರಾಷ್ಟ್ರೀಯ ಹೆದ್ದಾರಿ 66ರಲ್ಲಿ) ರವಿವಾರ ಮುಂಜಾನೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವರನ್ನುಕಾರು ಚಲಾಯಿಸುತ್ತಿದ್ದ ಕಾವೂರು ಸಮೀಪದ ಗಾಂಧಿ ನಗರದ ನಿವಾಸಿ ಚೇತನ್‌ (21) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮಂಗಳೂರು ಕಾರ್‌ಸ್ಟ್ರೀಟ್‌ನಪ್ರೀತಮ್‌ (18), ಬಿ.ಸಿ. ರೋಡ್‌ನ‌ ರಾಕೇಶ್‌ (24), ಕಾವೂರು ಗಾಂಧಿ ನಗರದ ಪ್ರತ್ಯುಶ್‌ (21), ಸ್ವರೂಪ್‌ (18) ಮತ್ತು ಅರುಣ್‌ ಗಟ್ಟಿ (18) ಎಂದು ಹೆಸರಿಸಲಾಗಿದೆ.

ಚೇತನ್‌ ಹಾಗೂ ಅವರ ಸ್ನೇಹಿತರು ತಲಪಾಡಿಯ ತಮ್ಮ ಸಂಬಂಧಿಕರ ಮನೆಯಲ್ಲಿ ಶನಿವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರುದಿನ ಮುಂಜಾನೆ ಮಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕೇರಳ ಭಾಗದಿಂದ ಮಂಗಳೂರು ಕಡೆ ಹೋಗುತ್ತಿದ್ದ ಕಂಟೈನರ್‌ ಲಾರಿಯನ್ನು ಡೀಸೆಲ್‌ ಮುಗಿದ ಕಾರಣ ಕಲ್ಲಾಪುವಿನಲ್ಲಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಚೇತನ್‌ ವೇಗವಾಗಿ ಚಲಾಯಿಸಿದ್ದು, ಕಲ್ಲಾಪು ರಸ್ತೆ ಬದಿ ಇದ್ದ ಕಂಟೈನರ್‌ ಲಾರಿಯ ಸಮೀಪ ತಲುಪಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಹಾನಿಗೊಂಡಿದ್ದು,, ಚಾಲಕ ಚೇತನ್‌ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

Comments are closed.