ಮನೋರಂಜನೆ

ಪ್ರೀತಿಸಿ ಮೋಸ ಹೋದ ಕನ್ನಡ ಕಿರುತೆರೆ ನಟಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು (ಜೂ.1): ಪ್ರೀತಿಸಿ ಮೋಸ ಹೋದ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವ ದೃಶ್ಯಗಳನ್ನು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ತೋರಿಸಲಾಗುತ್ತದೆ. ನಿಜ ಜೀವನದಲ್ಲೂ ಈ ರೀತಿಯ ಸಾಕಷ್ಟು ಘಟನೆ ನಡೆದಿವೆ. ವಿಚಿತ್ರ ಎಂದರೆ, ಪ್ರೀತಿಸಿ ಮೋಸ ಹೋದ ಕಿರುತೆರೆ ನಟಿ ಚಂದನಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಂದನಾ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಐದು ವರ್ಷಗಳಿಂದ ದಿನೇಶ್ ಎಂಬಾತನನ್ನು ಚಂದನಾ ಪ್ರೀತಿಸುತ್ತಿದ್ದರು. ಅಲ್ಲದೆ, ಮದುವೆ ಆಗುವ ನಿರ್ಧಾರವನ್ನು ಕೂಡ ಇಬ್ಬರು ತೆಗೆದುಕೊಂಡಿದ್ದರು.

ಇತ್ತೀಚೆಗೆ ಮದುವೆಯಾಗುವಂತೆ ದಿನೇಶ್​ಗೆ ಚಂದನಾ ಒತ್ತಾಯ ಮಾಡಿದ್ದರು. ‘ಈಗ ಲಾಕ್​ಡೌನ್​ ಇದೆ. ಹೀಗಾಗಿ ಲಾಕ್​ಡೌನ್​ ಪೂರ್ಣಗೊಂಡ ನಂತರ ಮದುವೆಯಾಗುವುದಾಗಿ’ ದಿನೇಶ್​ ಭರವಸೆ ನೀಡಿದ್ದ. ಆದರೆ, ಮತ್ತೆ ಉಲ್ಟಾ ಹೊಡೆದಿದ್ದ ದಿನೇಶ್​ ಮದುವೆಯಾಗಲು ನಿರಾಕರಿಸಿದ್ದ.

ಇನ್ನು, ಮದುವೆ ಆಗುವುದಾಗಿ ನಂಬಿಸಿ ಚಂದನಾ ಜೊತೆ ಈತ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇನ್ನು, ಐದು ಲಕ್ಷ ಹಣ ಪಡೆದು ದಿನೇಶ್ ವಂಚಿಸಿದ್ದ ಎಂದು ಚಂದನಾ ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಎಲ್ಲ ಘಟನೆಯಿಂದ ಮನನೊಂದ ಚಂದನಾ ಮೇ 28 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ವಿಷ ಸೇವಿಸಿದ ಚಂದಳಾನ ಪ್ರಿಯಕರ ದಿನೇಶನೇ ಆಸ್ಪತ್ರೆಗೆ ದಾಖಲು‌ ಮಾಡಿದ್ದ. ಆದ್ರೆ ಮೂರು ದಿನಗಳ ಬಳಿಕ ಚಂದನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಹಿನ್ನಲೆ ದಿನೇಶ ಎಸ್ಕೇಪ್ ಆಗಿದ್ದಾನೆ. ಈಗ ಚಂದನಾ ಮನೆಯವರು ದಿನೇಶ್ ಹಾಗೂ ಆತನ ಕುಟುಂಬಸ್ಥರ ಮೇಲೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಇತ್ತ ದೂರು ದಾಖಲಾಗುತ್ತಿದ್ದಂತೆ ಮೈಕೋ ಲೇ ಔಟ್ ಎಸಿಪಿ ಸುಧೀರ್ ಹೆಗ್ಡೆ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿಯವರ ಮಾರ್ಗದರ್ಶನದಲ್ಲಿ ಸುದ್ದುಗುಂಟೆಪಾಳ್ಯ ಇನ್ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ದಿನೇಶ್​ ಮಾರತ್ತಹಳ್ಳಿಯ ಕಂಪನಿಯೊಂದಲ್ಲಿ ಸಾಪ್ಟ್​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಚಂದನಾ ಹಾಸನದ ಬೇಲೂರು ಮೂಲದವರು. ಸದ್ಯ ದಿನೇಶ್ ಹಾಗೂ ಆತನ ಕುಟುಂಬದವರ ಮೇಲೆ ದೂರು ದಾಖಲಾಗಿದೆ.

Comments are closed.